ಮುಂಬೈ: ಭಾರತೀಯ ಷೇರು ಮಾರುಕಟ್ಟೆ ವಾರದ ಕೊನೆಯ ದಿನವಾದ ಶುಕ್ರವಾರ ಒಂದೇ ದಿನ ಭಾರಿ ಕುಸಿತ ಕಂಡಿದ್ದು, ಸೆನ್ಸೆಕ್ಸ್ 1 ಸಾವಿರಕ್ಕೂ ಅಧಿಕ ಅಂಕಗಳ ನಷ್ಟ ಅನುಭವಸಿದ್ದು ಮಾತ್ರವಲ್ಲದೇ ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟವಾಗಿದೆ.
ಇಂದು ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸೆ ಬರೊಬ್ಬರಿ 1, 017 ಅಂಕಗಳ ಕುಸಿತ ಕಂಡಿದ್ದು ಆ ಮೂಲಕ ಶೇ.1.24ರಷ್ಟು ಕುಸಿತದೊಂದಿಗೆ 81,183 ಅಂಕಗಳಿಗೆ ಕುಸಿದಿದೆ. ಅಂತೆಯೇ ನಿಫ್ಟಿ ಕೂಡ ಶೇ.1.17ರಷ್ಟು ಅಂದರೆ 293 ಅಂಕಗಳಷ್ಟು ಕುಸಿತಗೊಂಡು 24,852 ಅಂಕಗಳಿಗೆ ಕುಸಿದಿದೆ.
ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ಕಡಿತದ ಮೇಲೆ ಪ್ರಭಾವ ಬೀರಬಹುದಾದ ನಿರ್ಣಾಯಕ ಅಮೆರಿಕ ಉದ್ಯೋಗಗಳ ವರದಿಯ ವಿಚಾರವಾಗಿ ಇಂದು ಹೂಡಿಕೆದಾರರು ವಹಿವಾಟು ನಡೆಸಲು ತೋರಿದ ಅತೀವ ಜಾಗರೂಕತೆ ಇಂದಿನ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ಎಲ್ಲ ವಲಯಗಳಲ್ಲೂ ಮಾರಾಟದ ಒತ್ತಡ ಕಂಡುಬಂದಿದೆ.
ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟ
ಇದೇ ವೇಳೆ ಇಂದಿನ ಮಾರುಕಟ್ಟೆ ಕುಸಿತದ ಪರಿಣಾಮವಾಗಿ ಇಂದು ಹೂಡಿಕೆದಾರರ ಸುಮಾರು 5.2 ಲಕ್ಷ ಕೋಟಿ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇಂದಿನ ವಹಿವಾಟಿನ ಅಂತ್ಯಕ್ಕೆ ಪಟ್ಟಿ ಮಾಡಲಾದ ಸಂಸ್ಥೆಗಳ ಹೂಡಿಕೆ 460.46 ಲಕ್ಷ ಕೋಟಿ ರೂಗೆ ಕುಸಿದಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಇನ್ಫೋಸಿಸ್ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ ಕಂಡಿದ್ದು, ಇವುಗಳ ಮೌಲ್ಯ ಕುಸಿತದಿಂದಾಗಿಯೇ ಸೆನ್ಸೆಕ್ಸ್‌ನ ಒಟ್ಟು 538 ಅಂಕಗಳು ಕುಸಿತಗೊಂಡಿವೆ. ಹೆಚ್ಚುವರಿಯಾಗಿ, ITC, HDFC ಬ್ಯಾಂಕ್, L&T, ಮತ್ತು ಆಕ್ಸಿಸ್ ಬ್ಯಾಂಕ್ ಗಳ ಷೇರು ಮೌಲ್ಯ ಕುಸಿತ ಕೂಡ ಸೂಚ್ಯಂಕದ ಕುಸಿತಕ್ಕೆ ಪ್ರಮುಖ ಕೊಡುಗೆ ನೀಡಿದವು.