ಮಾಸ್ಕೋ: ರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧದ ಕ್ರೆಮ್ಲಿನ್ ಯುದ್ಧಕ್ಕೆ ಹಣಕಾಸು ಸಹಾಯ ಮಾಡುವುದನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಮತ್ತು ಭಾರತವನ್ನು ಒತ್ತಾಯಿಸುತ್ತಿದ್ದಾರೆ.
ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಒತ್ತಾಯಿಸಲು ಟ್ರಂಪ್ ಈ ವಿಷಯವನ್ನು ಹೆಚ್ಚು ಪ್ರಸ್ತಾಪಿಸುತ್ತಿದ್ದಾರೆ. ಆದರೆ ಅಗ್ಗದ ದರದಲ್ಲಿ ಲಭ್ಯವಿರುವ ರಷ್ಯಾದ ತೈಲ ಭಾರತ- ಚೀನಾದ ಸಂಸ್ಕರಣಾಗಾರಗಳಿಗೆ ಪ್ರಯೋಜನವನ್ನು ನೀಡುವುದರ ಜೊತೆಗೆ ಇಂಧನ ಅಗತ್ಯಗಳನ್ನು ಪೂರೈಸುತ್ತದೆ. ಆದ್ದರಿಂದ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಯಾವುದೇ ದೇಶಗಳೂ ಒಲವು ತೋರಿಸುತ್ತಿಲ್ಲ.
ಚೀನಾ, ಭಾರತ ಮತ್ತು ಟರ್ಕಿ ಯುರೋಪಿಯನ್ ಒಕ್ಕೂಟಕ್ಕೆ ಹೋಗುತ್ತಿದ್ದ ತೈಲವನ್ನು ಅತಿ ದೊಡ್ದ ಪ್ರಮಾಣದಲ್ಲಿ ಖರೀದಿಸುವ ದೇಶಗಳಾಗಿವೆ.
ಜನವರಿ 2023 ರಿಂದ ರಷ್ಯಾದಿಂದ ಸಮುದ್ರದ ಮೂಲಕ ಸರಬರಾಜಾಗುತ್ತಿದ್ದ ಹೆಚ್ಚಿನ ಪ್ರಮಾಣದ ತೈಲವನ್ನು ಬಹಿಷ್ಕರಿಸುವ EU ನಿರ್ಧಾರ ಯುರೋಪಿನಿಂದ ಏಷ್ಯಾಕ್ಕೆ ಕಚ್ಚಾ ತೈಲ ಹರಿವಿನಲ್ಲಿ ಬೃಹತ್ ಬದಲಾವಣೆಗೆ ಕಾರಣವಾಯಿತು.
ಅಂದಿನಿಂದ, EU ಬಹಿಷ್ಕಾರದ ನಂತರ ಚೀನಾ ರಷ್ಯಾದ ಇಂಧನದ ಒಟ್ಟಾರೆ ಖರೀದಿದಾರರಲ್ಲಿ ಸುಮಾರು $219.5 ಶತಕೋಟಿ ಮೌಲ್ಯದ ರಷ್ಯಾದ ತೈಲ, ಅನಿಲ ಮತ್ತು ಕಲ್ಲಿದ್ದಲು ಆಮದಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಭಾರತ $133.4 ಶತಕೋಟಿಯೊಂದಿಗೆ ಮತ್ತು ಟರ್ಕಿ $90.3 ಶತಕೋಟಿಯೊಂದಿಗೆ ಅನುಕ್ರಮವಾಗಿ ಎರಡು ಮತ್ತು 3 ನೇ ಸ್ಥಾನದಲ್ಲಿವೆ.
ಉಕ್ರೇನ್-ರಷ್ಯಾ ಯುದ್ಧದ ಮೊದಲು, ಭಾರತ ತುಲನಾತ್ಮಕವಾಗಿ ಕಡಿಮೆ ಪ್ರಮಾಣದಲ್ಲಿ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಂಡಿದೆ. ಹಂಗೇರಿ ರಷ್ಯಾದ ತೈಲವನ್ನು ಪೈಪ್‌ಲೈನ್ ಮೂಲಕ ಆಮದು ಮಾಡಿಕೊಳ್ಳುತ್ತದೆ. ಹಂಗೇರಿ EU ಸದಸ್ಯ ರಾಷ್ಟ್ರವಾಗಿದ್ದು, ಅಧ್ಯಕ್ಷ ವಿಕ್ಟರ್ ಓರ್ಬನ್ ರಷ್ಯಾ ವಿರುದ್ಧದ ನಿರ್ಬಂಧಗಳನ್ನು ಟೀಕಿಸಿದ್ದಾರೆ.
ರಷ್ಯಾದ ಕಚ್ಚಾ ತೈಲ ಅಗ್ಗದ ದರದಲ್ಲಿ ಲಭ್ಯವಿದೆ ಎಂಬ ಕಾರಣಕ್ಕೆ ರಷ್ಯಾದಿಂದ ತೈಲಕ್ಕೆ ಹೆಚ್ಚಿನ ಬೇಡಿಕೆ ಇದೆ.
ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್‌ಗಿಂತ ಕಡಿಮೆ ಬೆಲೆಗೆ ವ್ಯಾಪಾರ ಮಾಡುವುದರಿಂದ, ಸಂಸ್ಕರಣಾಗಾರಗಳು ಕಚ್ಚಾ ತೈಲವನ್ನು ಡೀಸೆಲ್ ಇಂಧನದಂತಹ ಬಳಸಬಹುದಾದ ಉತ್ಪನ್ನಗಳಾಗಿ ಪರಿವರ್ತಿಸಿದಾಗ ಅವುಗಳ ಲಾಭದ ಅಂಚನ್ನು ಹೆಚ್ಚಿಸಬಹುದು ಎಂಬ ಕಾರಣಕ್ಕೆ ಭಾರತ, ಚೀನಾ, ಟರ್ಕಿಗಳು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದು ನಿರ್ಬಂಧಗಳ ಹೊರತಾಗಿಯೂ ರಷ್ಯಾಗೆ ತೈಲದಿಂದ ಗಳಿಕೆಯ ಮಾರ್ಗವನ್ನು ಉತ್ತಮವಾಗಿರಿಸಿದೆ.
ಜೂನ್‌ನಲ್ಲಿ ರಷ್ಯಾ ತೈಲ ಮಾರಾಟದಿಂದ $12.6 ಬಿಲಿಯನ್ ಗಳಿಸಿದೆ ಎಂದು ಕೈವ್ ಸ್ಕೂಲ್ ಆಫ್ ಎಕನಾಮಿಕ್ಸ್ ಹೇಳುತ್ತದೆ. ಏಳು ಪ್ರಮುಖ ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಗುಂಪು ತೈಲ ಬೆಲೆ ಮಿತಿಯನ್ನು ವಿಧಿಸುವ ಮೂಲಕ ರಷ್ಯಾದ ನಿರ್ಧಾರವನ್ನು ಮಿತಿಗೊಳಿಸಲು ಪ್ರಯತ್ನಿಸಿದ್ದರೂ ಸಹ ರಷ್ಯಾ ಗಣನೀಯ ಮೊತ್ತವನ್ನು ಗಳಿಸುತ್ತಲೇ ಇದೆ.
ಹಡಗು ಮತ್ತು ವಿಮಾ ಕಂಪನಿಗಳು ಮಿತಿಗಿಂತ ಹೆಚ್ಚಿನ ತೈಲ ಸಾಗಣೆಯನ್ನು ನಿರ್ವಹಿಸಲು ನಿರಾಕರಿಸುವಂತೆ ಒತ್ತಾಯಿಸುವ ಮೂಲಕ ಮಿತಿಯನ್ನು ಜಾರಿಗೊಳಿಸಲು ಯುರೋಪಿಯನ್ ಯೂನಿಯನ್ ಯತ್ನಿಸುತ್ತಿದೆ.
ನಿರ್ಬಂಧಗಳನ್ನು ಜಾರಿಗೊಳಿಸದ ದೇಶಗಳಲ್ಲಿರುವ ವಿಮಾದಾರರು ಮತ್ತು ವ್ಯಾಪಾರ ಕಂಪನಿಗಳನ್ನು ಬಳಸಿಕೊಂಡು ಹಳೆಯ ಹಡಗುಗಳ "ಶ್ಯಾಡೋ ಫ್ಲೀಟ್" ನಲ್ಲಿ ತೈಲವನ್ನು ಸಾಗಿಸುವ ಮೂಲಕ ರಷ್ಯಾವು ಹೆಚ್ಚಿನ ಪ್ರಮಾಣದಲ್ಲಿ ಮಿತಿಯನ್ನು ತಪ್ಪಿಸಲು ಸಾಧ್ಯವಾಗಿದೆ.
ಕೈವ್ ಸಂಸ್ಥೆಯ ಪ್ರಕಾರ, ರಷ್ಯಾದ ತೈಲ ರಫ್ತುದಾರರು ಈ ವರ್ಷ $153 ಶತಕೋಟಿ ಆದಾಯ ಗಳಿಸುವ ನಿರೀಕ್ಷೆಯಿದೆ. ಪಳೆಯುಳಿಕೆ ಇಂಧನಗಳು ಬಜೆಟ್ ಆದಾಯದ ಏಕೈಕ ಅತಿದೊಡ್ಡ ಮೂಲವಾಗಿದೆ.
ಆಮದುಗಳು ರಷ್ಯಾದ ರೂಬಲ್ ಕರೆನ್ಸಿಯನ್ನು ಬೆಂಬಲಿಸುತ್ತವೆ ಮತ್ತು ಶಸ್ತ್ರಾಸ್ತ್ರಗಳು ಮತ್ತು ಅವುಗಳ ಭಾಗಗಳು ಸೇರಿದಂತೆ ಇತರ ದೇಶಗಳಿಂದ ಸರಕುಗಳನ್ನು ಖರೀದಿಸಲು ರಷ್ಯಾಕ್ಕೆ ಸಹಾಯ ಮಾಡುತ್ತವೆ.