ಮುಂಬೈ: ಭಾರತ ಮತ್ತು ಅಮೆರಿಕ ನಡುವಿನ ಸುಂಕ ಸಮರ ಮುಂದುವರೆದಿರುವಂತೆಯೇ ಇತ್ತ ಭಾರತೀಯ ಷೇರುಮಾರುಕಟ್ಟೆ ಮತ್ತೆ ಭಾರಿ ಕುಸಿತ ಕಂಡಿದೆ.
ಹೌದು.. ಭಾರತೀಯ ಷೇರುಮಾರುಕಟ್ಟೆಯ ಕುಸಿತ ಶುಕ್ರವಾರವೂ ಮುಂದುವರೆದಿದ್ದು ಶುಕ್ರವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.95ರಷ್ಟು ಕುಸಿತ ಕಂಡಿದ್ದರೆ, ನಿಫ್ಟಿ ಕೂಡ ಶೇ.0.95ರಷ್ಟು ಇಳಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 765.47ಅಂಕಗಳ ಕುಸಿತದೊಂದಿಗೆ 79,857.79 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 232.85 ಅಂಕಗಳ ಏರಿಕೆಯೊಂದಿಗೆ 24,363.30 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಭಾರ್ತಿ ಏರ್‌ಟೆಲ್, ಟಾಟಾ ಮೋಟಾರ್ಸ್, ಮಹೀಂದ್ರಾ & ಮಹೀಂದ್ರಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
ಭಾರತ-ಅಮೆರಿಕ ಸುಂಕ ಯುದ್ಧ
ಇನ್ನು ಭಾರತೀಯ ಷೇರುಮಾರುಕಟ್ಟೆಯ ಹಾಲಿ ಕುಸಿತಕ್ಕೆ ಭಾರತ ಮತ್ತು ಅಮೆರಿಕ ನಡುವಿನ ಶೀಥಲ ಸಮರ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾ ಜೊತೆಗಿನ ಭಾರತದ ಇಂಧನ ಖರೀದಿ ವಿಚಾರವಾಗಿ ಭಾರತದ ವಿರುದ್ಧ ಕೆಂಗಣ್ಣು ಬೀರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ ಶೇ.25 ರಷ್ಟು ಸುಂಕ ಏರಿಸಿದ್ದಾರೆ. ಆ ಮೂಲಕ ಭಾರತದ ಮೇಲಿನ ಸುಂಕ ಶೇ.50ಕ್ಕೆ ಏರಿಕೆಯಾಗಿದೆ. ಇದು ಉಭಯ ದೇಶಗಳ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದೆ.