ನವದೆಹಲಿ: ಮಧ್ಯಮ ಮತ್ತು ಕಡಿಮೆ ಆದಾಯ ಹೊಂದಿರುವ ಜನರಿಗೆ ಮತ್ತಷ್ಟು ರಿಲೀಫ್ ನೀಡುವ ನಿಟ್ಟಿನಲ್ಲಿ ಸರಕು ಮತ್ತು ಸೇವಾ (GST) ತೆರಿಗೆ ಸ್ಲ್ಯಾಬ್ ನಲ್ಲಿ ಭಾರೀ ಕಡಿತ ಮಾಡಲು ಜಿಎಸ್ ಟಿ ಕೌನ್ಸಿಲ್ ಸಭೆ ( GoM) ಅನುಮೋದನೆ ನೀಡಿರುವುದಾಗಿ ವರದಿಯಾಗಿದೆ.
ಗುರುವಾರ ನಡೆದ ರಾಜ್ಯ ಸಚಿವರನ್ನೊಳಗೊಂಡ ಸಮಿತಿ ಸಭೆಯಲ್ಲಿ ನಾಲ್ಕು ದರಗಳ ವ್ಯವಸ್ಥೆಯನ್ನು ಎರಡು ಪ್ರಮುಖ ಸ್ಲ್ಯಾಬ್ ಗಳಾದ ಶೇ. 5 ಮತ್ತು ಶೇ. 18 ಕ್ಕೆ ಇಳಿಕೆ ಮಾಡಲು ಅನುಮೋದನೆ ನೀಡಿದೆ. GST 2.0 ಎಂದು ಕರೆಯಲಾಗುವ ಈ ಕ್ರಮದಿಂದಾಗಿ ಹಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.
ಸದ್ಯ ಶೇ.5, ಶೇ. 12, ಶೇ.18 ಮತ್ತು ಶೇ. 28 ರಂತೆ ನಾಲ್ಕು ವಿಭಿನ್ನ ದರಗಳಲ್ಲಿ ಜಿಎಸ್ ಟಿಯನ್ನು ಹಾಕಲಾಗುತ್ತಿದೆ. ನೂತನ ವ್ಯವಸ್ಥೆಯಡಿ ಶೇ. 12 ಮತ್ತು ಶೇ. 28 ರಷ್ಟು ಸ್ಲ್ಯಾಬ್‌ಗಳನ್ನು ರದ್ದುಗೊಳಿಸಲಾಗುತ್ತದೆ. ಇದರಿಂದಾಗಿ ಸರಕು ಮತ್ತು ಸೇವೆಗಳಿಗೆ ಶೇ. 5 ರಷ್ಟು ಮತ್ತು ಶೇ. 18 ರಷ್ಟು ತೆರಿಗೆ ನೀಡಬೇಕಾಗುತ್ತದೆ.
ತಂಬಾಕು ಮತ್ತು ಕೆಲವು ಐಷಾರಾಮಿ ವಸ್ತುಗಳಂತಹ ಮೇಲಿನ ಶೇ. 40 ರಷ್ಟು ತೆರಿಗೆ ಮುಂದುವರೆಯುತ್ತದೆ. ಅಲ್ಲದೇ ಐಷಾರಾಮಿ ಕಾರುಗಳನ್ನು ಶೇ. 40 ರಷ್ಟು ತೆರಿಗೆ ವ್ಯಾಪ್ತಿಗೆ ತರಲು ಸಮಿತಿ ಶಿಫಾರಸು ಮಾಡಿದೆ.
ನೂತನ ಯೋಜನೆ ಪ್ರಕಾರ, ಈ ಹಿಂದೆ ಶೇ. 12 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಶೇ. 99 ರಷ್ಟು ಸರಕುಗಳು ಈಗ ಶೇ. 5 ರಷ್ಟು ಕಡಿಮೆ ಸ್ಲ್ಯಾಬ್‌ಗೆ ಹೋಗುತ್ತವೆ. ಅಂತೆಯೇ ಶೇ. 28 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಶೇ. 90 ರಷ್ಟು ಸರಕುಗಳು ಶೇ. 18ರ ಸ್ಲ್ಯಾಬ್ ಗೆ ಬದಲಾಗುತ್ತವೆ.
ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್, ಪಶ್ಚಿಮ ಬಂಗಾಳದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ, ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇ ಗೌಡ, ಕೇರಳದ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ಹಣಕಾಸು ಸಚಿವಾಲಯದ ವಿವರವಾದ ಪ್ರಸ್ತಾವನೆಗಳನ್ನು ಪರಿಶೀಲಿಸಿದ ನಂತರ ಸಚಿವರು ನೂತನ ತೆರಿಗೆ ವ್ಯವಸ್ಥೆ ಜಾರಿಗೆ ಅನುಮೋದನೆ ನೀಡಿದ್ದಾರೆ. ಆರೋಗ್ಯ ಮತ್ತು ಜೀವ ವಿಮೆಯನ್ನು ವಿನಾಯಿತಿ ನೀಡುವ ಕೇಂದ್ರದ ಯೋಜನೆಯನ್ನು ಸಹ GoM ಚರ್ಚಿಸಿದೆ ಎನ್ನಲಾಗಿದೆ. ಒಂದು ವೇಳೆ ಇದಕ್ಕೂ ಅನುಮೋದನೆಯಾಗಿದ್ದರೆ ಪಾಲಿಸಿದಾರರು ಇನ್ನು ಮುಂದೆ ತಮ್ಮ ಪ್ರೀಮಿಯಂಗಳ ಮೇಲೆ GST ಪಾವತಿಸುವ ಅಗತ್ಯ ಇರುವುದಿಲ್ಲ.