ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಡಿಜಿಟಲ್ ಪಾವತಿ ಹೆಚ್ಚುತ್ತಿದ್ದು, ಇದರ ಪರಿಣಾಮ 2025ನೇ ಹಣಕಾಸು ವರ್ಷದಲ್ಲಿ ಸ್ವಯಂಚಾಲಿತ ಟೆಲ್ಲರ್ ಯಂತ್ರ(ಎಟಿಎಂ)ಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸೋಮವಾರ ಆರ್‌ಬಿಐ ವರದಿ ತಿಳಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳ ನೆಟ್‌ವರ್ಕ್ ವಿಸ್ತರಣೆಯ ಪರಿಣಾಮವಾಗಿ ಬ್ಯಾಂಕ್ ಶಾಖೆಗಳ ಸಂಖ್ಯೆ ಶೇಕಡಾ 2 ರಷ್ಟು ಹೆಚ್ಚಾಗಿದೆ ಎಂದು 2025ನೇ ಹಣಕಾಸು ವರ್ಷದ ಭಾರತದಲ್ಲಿ ಬ್ಯಾಂಕಿಂಗ್‌ನ ಪ್ರವೃತ್ತಿ ಮತ್ತು ಪ್ರಗತಿ ಕುರಿತ ವರದಿ ತಿಳಿಸಿದೆ.
ಮಾರ್ಚ್ 31, 2025ರ ವೇಳೆಗೆ ಒಟ್ಟಾರೆ ಎಟಿಎಂಗಳ ಸಂಖ್ಯೆ 2,51,057ಕ್ಕೆ ಇಳಿದಿದೆ. ಇದು ಹಿಂದಿನ ವರ್ಷ 2,53,417 ರಷ್ಟಿತ್ತು. ಇದು ಖಾಸಗಿ ವಲಯದ ಬ್ಯಾಂಕುಗಳ ಕಾರ್ಯತಂತ್ರಗಳಿಂದಾಗಿ ಮತ್ತಷ್ಟು ಕಡಿಮೆಯಾಗಿದೆ ಎಂದು ವರದಿ ಸೂಚಿಸಿದೆ.
ಖಾಸಗಿ ವಲಯದ ಬ್ಯಾಂಕುಗಳ ಎಟಿಎಂ ಜಾಲವು ಕಳೆದ ವರ್ಷ 79,884 ರಿಂದ 77,117 ಕ್ಕೆ ಇಳಿದಿದೆ. ಆದರೆ ಸಾರ್ವಜನಿಕ ವಲಯದ ಬ್ಯಾಂಕುಗಳು ಸಹ ಹಿಂದಿನ ವರ್ಷದ 1,34,694 ರಿಂದ 1,33,544 ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ. ಖಾಸಗಿ ಮತ್ತು ಸರ್ಕಾರಿ ವಲಯದ ಬ್ಯಾಂಕ್ ಗಳು ಆಫ್‌ಸೈಟ್ ಎಟಿಎಂಗಳನ್ನು ಸ್ಥಗಿತಗೊಳಿಸಿದ್ದರಿಂದ ಈ ಕುಸಿತ ಸಂಭವಿಸಿದೆ ಎಂದು ವರದಿ ತಿಳಿಸಿದೆ.
"ಪಾವತಿಗಳ ಡಿಜಿಟಲೀಕರಣದಲ್ಲಿನ ಹೆಚ್ಚಳವು ಗ್ರಾಹಕರು ಎಟಿಎಂಗಳೊಂದಿಗೆ ವಹಿವಾಟು ನಡೆಸುವ ಅಗತ್ಯವನ್ನು ಕಡಿಮೆ ಮಾಡಿದೆ" ಎಂದು ವರದಿ ಹೇಳಿದೆ.
ಸ್ವತಂತ್ರವಾಗಿ ನಡೆಸಲ್ಪಡುವ ವೈಟ್ ಲೇಬಲ್ ಎಟಿಎಂಗಳು ಹಿಂದಿನ ವರ್ಷದ ಅವಧಿಯಲ್ಲಿ 34,602 ರಿಂದ 36,216 ಕ್ಕೆ ಏರಿವೆ.
ಆದಾಗ್ಯೂ, ಡಿಜಿಟಲ್ ತಂತ್ರಜ್ಞಾನಗಳಿಂದ ನಡೆಸಲ್ಪಡುವ ಪರ್ಯಾಯ ಮಾರ್ಗಗಳ ಹೊರತಾಗಿಯೂ ಬ್ಯಾಂಕುಗಳು ಹೊಸ ಶಾಖೆಗಳನ್ನು ತೆರೆಯುತ್ತಲೇ ಇವೆ. ಮಾರ್ಚ್ 31 ರ ಹೊತ್ತಿಗೆ, ದೇಶದಲ್ಲಿ 1.64 ಲಕ್ಷ ಶಾಖೆಗಳಿದ್ದು, ಇದು ಶೇಕಡಾ 2.8 ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.