ಆನ್‌ಲೈನ್ ಆಹಾರ ವಿತರಣಾ ಸಂಸ್ಧೆ ಜೊಮಾಟೊ ಹೆಸರು ಬದಲಾಗಿದೆ. ಈಗ ಈ ಕಂಪನಿಯ ಹೊಸ ಹೆಸರು ಎಟರ್ನಲ್ ಲಿಮಿಟೆಡ್. ಈ ಸಂಬಂಧ ಜೊಮ್ಯಾಟೊ ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿದೆ. ಜೊಮಾಟೊ ಹೆಸರನ್ನು ಎಟರ್ನಲ್ ಲಿಮಿಟೆಡ್ ಎಂದು ಬದಲಾಯಿಸಲು ಮಂಡಳಿಯು ಅನುಮೋದನೆ ನೀಡಿದೆ ಎಂದು ಕಂಪನಿ ತಿಳಿಸಿದೆ.
ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ತಮ್ಮ ಷೇರುದಾರರಿಗೆ ಪತ್ರ ಬರೆದು ಹೊಸ ಹೆಸರಿನ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಜೊಮ್ಯಾಟೊ ಒಂದು ಆಕಸ್ಮಿಕ ಕಂಪನಿ ಎಂದು ಅವರು ಹೇಳಿದರು. ಕಳೆದ ವರ್ಷ ಡಿಸೆಂಬರ್ 23ರಂದು ನಾವು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವನ್ನು ಪ್ರವೇಶಿಸಿದ್ದೇವೆ. 17 ವರ್ಷಗಳ ಹಿಂದೆ ಇದೇ ದಿನ ನಾನು ಜೊಮ್ಯಾಟೊವನ್ನು ಫುಡಿಬೇ ಆಗಿ ಪ್ರಾರಂಭಿಸಿದ್ದೆ. ಆರಂಭದ ದಿನಗಳಲ್ಲಿ ನಾನು ಜೊಮ್ಯಾಟೋದಿಂದ ಯಾವುದೇ ಹಣ ಸಂಪಾದಿಸಲಿಲ್ಲ. ನಾನು ಇದನ್ನು ಪ್ರಾರಂಭಿಸಿದ್ದು ನಾನು ಏನಾದರೂ ವಿಭಿನ್ನವಾಗಿ ಮಾಡಲು ಸಾಧ್ಯವಾಗಲಿ ಎಂದು.
ನಾವು ಬ್ಲಿಂಕಿಟ್ ಅನ್ನು ಸ್ವಾಧೀನಪಡಿಸಿಕೊಂಡಾಗ, ಕಂಪನಿ ಮತ್ತು ಬ್ರ್ಯಾಂಡ್/ಆ್ಯಪ್ ನಡುವೆ ವ್ಯತ್ಯಾಸವನ್ನು ತೋರಿಸಲು ಆಂತರಿಕವಾಗಿ ಜೊಮಾಟೊ ಬದಲಿಗೆ ಎಟರ್ನಲ್ ಅನ್ನು ಬಳಸಲು ಪ್ರಾರಂಭಿಸಿದೆವು. ನಾವು ಕಂಪನಿಯ ಹೆಸರನ್ನು ಸಾರ್ವಜನಿಕವಾಗಿ ಎಟರ್ನಲ್ ಎಂದು ಬದಲಾಯಿಸುವ ಬಗ್ಗೆಯೂ ಯೋಚಿಸಿದ್ದೇವೆ. ಈಗ ನಾವು ಜೊಮಾಟೊ ಲಿಮಿಟೆಡ್ ಕಂಪನಿಯ ಹೆಸರನ್ನು ಎಟರ್ನಲ್ ಲಿಮಿಟೆಡ್ ಎಂದು ಬದಲಾಯಿಸಿದ್ದೇವೆ ಎಂದು ತಿಳಿಸಿದರು.
ಸದ್ಯ ಜೊಮ್ಯಾಟೋ ಅಪ್ಲಿಕೇಶನ್‌ನ ಹೆಸರನ್ನು ಬದಲಾಯಿಸಲ್ಲ. ಆದರೆ ಸ್ಟಾಕ್ ಟಿಕ್ಕರ್ ಅನ್ನು ಜೊಮ್ಯಾಟೋದಿಂದ ಎಟರ್ನಲ್‌ಗೆ ಬದಲಾಯಿಸಲಾಗುತ್ತದೆ. ಎಟರ್ನಲ್ ನಾಲ್ಕು ಪ್ರಮುಖ ವ್ಯವಹಾರಗಳನ್ನು ಒಳಗೊಂಡಿದೆ. ಜೊಮಾಟೊ, ಬ್ಲಿಂಕಿಟ್, ಡಿಸ್ಟ್ರಿಕ್ಟ್ ಮತ್ತು ಹೈಪರ್‌ಪ್ಯೂರ್. ಇದು ಶಕ್ತಿಶಾಲಿ ಹೆಸರು ಎಂದು ಗೋಯಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ನಿಜ ಹೇಳಬೇಕೆಂದರೆ, ಇದನ್ನು ಸಾಧಿಸುವುದು ಕಷ್ಟಕರವಾದ ಕೆಲಸ. ಇದು ಕೇವಲ ಹೆಸರು ಬದಲಾವಣೆಯಲ್ಲ, ಬದಲಾಗಿ ಒಂದು ಧ್ಯೇಯವಾಗಿದೆ ಎಂದರು.
ಏತನ್ಮಧ್ಯೆ, ವಾರದ ನಾಲ್ಕನೇ ವಹಿವಾಟಿನ ದಿನವಾದ ಗುರುವಾರ ಜೊಮಾಟೊ ಷೇರುಗಳು 229.05 ರೂ.ಗಳಲ್ಲಿ ಮುಕ್ತಾಯಗೊಂಡಿವೆ. ಷೇರು ಬೆಲೆ ಹಿಂದಿನ ದಿನಕ್ಕಿಂತ ಶೇ. 0.95ರಷ್ಟು ಕುಸಿತ ಕಂಡಿತು. ವಹಿವಾಟಿನ ಸಮಯದಲ್ಲಿ, ಜೊಮಾಟೊ ಷೇರುಗಳು 234.60 ರೂ.ಗಳ ಮೇಲಿನ ಬೆಲೆಯಿಂದ 226.80 ರೂ.ಗಳ ಕೆಳಗಿನ ಬೆಲೆಯ ನಡುವೆ ವಹಿವಾಟು ನಡೆಸುತ್ತಿರುವುದು ಕಂಡುಬಂದಿದೆ. ಜೊಮಾಟೊ ಷೇರುಗಳ 52 ವಾರಗಳ ಕನಿಷ್ಠ ಮೌಲ್ಯ 139.10 ರೂ. ಈ ಬೆಲೆ ಫೆಬ್ರವರಿ 2024 ರಲ್ಲಿತ್ತು. ಷೇರುಗಳ 52 ವಾರಗಳ ಗರಿಷ್ಠ ಮೌಲ್ಯದ ಬಗ್ಗೆ ಹೇಳುವುದಾದರೆ, ಇದು 304.50 ರೂ. ಆಗಿದೆ.