ಮುಂಬೈ: ಭಾರತೀಯ ಷೇರುಮಾರುಕಟ್ಟೆ ಸತತ 8ನೇ ದಿನವೂ ಬಾರಿ ಕುಸಿತ ಕಂಡಿದ್ದು, ಇದರೊಂದಿಗೆ ಹೂಡಿಕೆದಾರರ ಬರೊಬ್ಬರಿ 78 ಲಕ್ಷ ಕೋಟಿ ರೂ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಹೌದು.. ಷೇರು ಮಾರುಕಟ್ಟೆಯ ರಕ್ತದೋಕುಳಿ ಮುಂದುವರಿಯುತ್ತಿದ್ದು, ನಿನ್ನೆ ವಾರದ ಅಂತಿಮ ದಿನ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಮೈನಸ್ನಲ್ಲಿ ವಹಿವಾಟು ಅಂತ್ಯಗೊಂಡಿವೆ. ನಿಫ್ಟಿ50 ಸೂಚ್ಯಂಕ 102 ಅಂಕಗಳನ್ನು ಕಳೆದುಕೊಂಡಿದ್ದರೆ, ಬಿಎಸ್‌ಇ ಸೆನ್ಸೆಕ್ಸ್ 200 ಅಂಕಗಳ ನಷ್ಟ ಮಾಡಿಕೊಂಡಿದೆ. ಸತತ 8ನೇ ಸೆಷನ್ ನಲ್ಲಿ ದೇಶದ ಪ್ರಮುಖ ಸೂಚ್ಯಂಕಗಳು ನಷ್ಟ ಕಂಡಿವೆ.
ನಿಫ್ಟಿ 50 ಮತ್ತು ಸೆನ್ಸೆಕ್ಸ್, ತಮ್ಮ ಗರಿಷ್ಠ ಮಟ್ಟದಿಂದ ಶೇಕಡಾ 12 ರಷ್ಟು ಕುಸಿದಿದ್ದು, ಕ್ರಮವಾಗಿ ನಿಫ್ಟಿ 22,929 ಮತ್ತು ಸೆನ್ಸೆಕ್ಸ್ 75,939 ಕ್ಕೆ ಕೊನೆಗೊಂಡವು. ಇದು ಜನವರಿ 27 ರ ನಂತರದ ಅತ್ಯಂತ ಕಡಿಮೆ ಮುಕ್ತಾಯ ಮತ್ತು ಎಂಟು ತಿಂಗಳ ಕನಿಷ್ಠ ಮಟ್ಟ ಎನ್ನಲಾಗಿದೆ.
ಅಂತೆಯೇ ವಾರದಲ್ಲಿ, ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡಾ 2.5 ಮತ್ತು 2.7 ರಷ್ಟು ಕಳೆದುಕೊಂಡಿದ್ದು, ಇದು ಎರಡು ವರ್ಷಗಳಲ್ಲಿ ಅತಿ ದೊಡ್ಡ ಇಳಿಕೆಯಾಗಿದೆ.
ಅಂದರೆ, ಫೆಬ್ರುವರಿ 5ರಿಂದ ಆರಂಭವಾಗಿ ನಿನ್ನೆಯವರೆಗೂ ಪ್ರತೀ ದಿನವೂ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಹಿನ್ನಡೆ ಕಂಡಿವೆ. ಕೆಲ ತಿಂಗಳಿಂದಲೂ ಷೇರುಪೇಟೆ ಹಿನ್ನಡೆಯಲ್ಲಿದ್ದರೂ ಆಗೊಮ್ಮೆ ಈಗೊಮ್ಮೆ ಪಾಸಿಟಿವ್ ಆಗಿ ನಿಲ್ಲುತ್ತಿತ್ತು. ಈಗ ಸತತ ಎಂಟು ದಿನ ಮಾರುಕಟ್ಟೆ ಪತನವಾಗಿದೆ. ಸ್ಮಾಲ್‌ಕ್ಯಾಪ್ ಷೇರುಗಳು ಶೇಕಡಾ 3 ಕ್ಕಿಂತ ಹೆಚ್ಚು ಕುಸಿದು, ಕರಡಿ-ಮಾರುಕಟ್ಟೆ ಪ್ರದೇಶಕ್ಕೆ ಇಳಿದವು, ಆದರೆ ಮಿಡ್‌ಕ್ಯಾಪ್‌ಗಳು ಶೇಕಡಾ 2.4 ರಷ್ಟು ಕುಸಿದು, ಗರಿಷ್ಠ ಮಟ್ಟದಿಂದ ಶೇಕಡಾ 18.4 ಕ್ಕೆ ಇಳಿದವು.
78 ಲಕ್ಷ ಕೋಟಿ ರೂ ನಷ್ಟ!
ಇನ್ನು ಸತತ ಕುಸಿತದ ಪರಿಣಾಮ ಷೇರುಮಾರುಕಟ್ಟೆಯಲ್ಲಿ ಈ ವರೆಗೂ ಸುಮಾರು 78 ಲಕ್ಷ ಕೋಟಿ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮಾರ್ಚ್ 20, 2020 ರಂದು ಕೊನೆಗೊಂಡ ಕೋವಿಡ್-ಪೀಡಿತ ವಾರಾಂತ್ಯದ ನಂತರ ಇದೇ ಮೊದಲ ಬಾರಿಗೆ ಈ ವಾರ ಷೇರುಮಾರುಕಟ್ಟೆ ಅತೀ ಹೆಚ್ಚು ಕುಸಿತ ದಾಖಲಿಸಿದೆ. ನಿಫ್ಟಿ ಸ್ಮಾಲ್‌ಕ್ಯಾಪ್ 100 ಶೇಕಡಾ 9.4 ರಷ್ಟು ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 7.4 ರಷ್ಟು ಕುಸಿದಿದೆ.
ನಿಫ್ಟಿ ಸ್ಮಾಲ್‌ಕ್ಯಾಪ್ 100 ತನ್ನ ಗರಿಷ್ಠ ಮಟ್ಟದಿಂದ ಶೇಕಡಾ 21.6 ರಷ್ಟು ಕುಸಿದಿದೆ, ಆದರೆ ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 18.4 ರಷ್ಟು ಕುಸಿದಿದೆ, ಎರಡೂ ಎಂಟು ತಿಂಗಳ ಕನಿಷ್ಠ ಮಟ್ಟದಲ್ಲಿ ಮುಕ್ತಾಯಗೊಂಡಿವೆ. ಅಂತೆಯೇ ಭಾರತದ ಗರಿಷ್ಠ ಮಾರುಕಟ್ಟೆ ಬಂಡವಾಳೀಕರಣದ ಪೈಕಿ ಸುಮಾರು 78 ಟ್ರಿಲಿಯನ್ ರೂ.ಗಳು ನಷ್ಟವಾಗಿದೆ. ಬಿಎಸ್‌ಇ-ಪಟ್ಟಿಮಾಡಿದ ಸಂಸ್ಥೆಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು ಶುಕ್ರವಾರ ರೂ. 7 ಟ್ರಿಲಿಯನ್‌ಗಳಷ್ಟು ಕುಸಿದು ರೂ. 400.2 ಟ್ರಿಲಿಯನ್‌ಗೆ ತಲುಪಿದೆ, ಇದು ಜೂನ್ ನಂತರದ ಕನಿಷ್ಠ ಮಟ್ಟವಾಗಿದೆ.
ಎರಡು ವರ್ಷದಲ್ಲಿ ಇದೇ ಮೊದಲು
ಅತಿ ಹೆಚ್ಚು ಸೆಷನ್ಸ್ ಹಿನ್ನಡೆ ಕಾಣುತ್ತಿರುವುದು ಕಳೆದ ಎರಡು ವರ್ಷದಲ್ಲಿ ಇದೇ ಮೊದಲಾಗಿದೆ. 2023ರ ಫೆಬ್ರುವರಿ 17ರಿಂದ 28ರವರೆಗೆ ಸತತ ಎಂಟು ದಿನ ನಿಫ್ಟಿ50 ಸೂಚ್ಯಂಕ ಇಳಿಮುಖ ಕಂಡಿತ್ತು. ಇದಾದ ಬಳಿಕ ಈ ದೀರ್ಘಾವಧಿ ಕುಸಿತ ಆಗಿರುವುದು ಇದೇ ಮೊದಲು. ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಉತ್ತಮ ಸಂಧಾನಗಳನ್ನು ಮಾಡಿದ್ದರೂ, ಅಮೆರಿಕದ ಜೊತೆ ಭಾರತದ ಉತ್ತಮ ಬಾಂಧವ್ಯ ಮುಂದುವರಿಯುವ ಸ್ಪಷ್ಟ ಸೂಚನೆ ಸಿಕ್ಕಿದ್ದರೂ ಮಾರುಕಟ್ಟೆಯ ಕುಸಿತ ಮಾತ್ರ ನಿಲ್ಲಲಿಲ್ಲ.