ಬೆಂಗಳೂರು: ಕರ್ನಾಟಕದ ಹೆಮ್ಮೆಯ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತನ (KMF) ನಂದಿನಿ ದೇಶದ ಆಹಾರ ಮತ್ತು ಪಾನೀಯ ವಿಭಾಗದ ಮುಂಚೂಣಿಯ ಬ್ರ್ಯಾಂಡ್ ಗಳಲ್ಲಿ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಲಂಡನ್ ಮೂಲದ ಪ್ರಮುಖ ಬ್ರ್ಯಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆ ಬ್ರ್ಯಾಂಡ್ ಫೈನಾನ್ಸ್ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ಜಾಗತಿಕ Rankingನಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಕಳೆದ ವರ್ಷ 43ನೇ ಸ್ಥಾನದಲ್ಲಿದ್ದ ನಂದಿನಿ, ಈ ಬಾರಿ 38ನೇ ಸ್ಥಾನಕ್ಕೆ ಜಿಗಿದು ದೇಶದ ಅಗ್ರ 40 ಅತ್ಯಂತ ಮೌಲ್ಯಯುತ ಭಾರತೀಯ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ.
ಬ್ರ್ಯಾಂಡ್ ಮೌಲ್ಯವು ಕಳೆದ ವರ್ಷಕ್ಕಿಂತ 139 ಮಿಲಿಯನ್ ಡಾಲರ್ ಹೆಚ್ಚಳವಾಗಿದ್ದು, ಒಟ್ಟು 1, 079 ಮಿಲಿಯನ್ ಡಾಲರ್ (ರೂ. 9,226 ಕೋಟಿಗೆ ತಲುಪಿದೆ.
ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಅಮುಲ್ ನಂಬರ್ 1 ಸ್ಥಾನದಲ್ಲಿದ್ದರೆ, ಮದರ್ ಡೈರಿ 2, ಬ್ರಿಟನಿಯಾ 3 ಸ್ಥಾನದಲ್ಲಿದ್ದು, ದಾಬೂರ್ ಐದನೇ ಸ್ಥಾನದಲ್ಲಿರುವುದಾಗಿ KMF ಹೇಳಿಕೆಯಲ್ಲಿ ತಿಳಿಸಿದೆ.
ನಂದಿನಿ ಬ್ರ್ಯಾಂಡ್ ನ ನಿರಂತರ ಕಾರ್ಯಕ್ಷಮತೆ ಮತ್ತು ಮೌಲ್ಯದಲ್ಲಿನ ಬೆಳವಣಿಗೆ ದಕ್ಷಿಣ ಭಾರತದಾದ್ಯಂತ ಮತ್ತು ಅದರಾಚೆಗಿನ ಹೆಚ್ಚುತ್ತಿರುವ ಬ್ರ್ಯಾಂಡ್ ಇಕ್ವಿಟಿ ಮತ್ತು ವಿಶ್ವಾಸವನ್ನು ಎತ್ತಿ ತೋರಿಸುತ್ತದೆ. ಇದು ನಂದಿನಿ ಬ್ರ್ಯಾಂಡ್ ನ ನಿರಂತರ ಬೆಳವಣಿಗೆ ಮತ್ತು ಗ್ರಾಹಕರ ವಿಶ್ವಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರ ನಿರಂತರ ವಿಶ್ವಾಸ ಮತ್ತು ಬೆಂಬಲ ನಂದಿನಿ ಬ್ರ್ಯಾಂಡ್ ನ ಬೆಳವಣಿಗೆ ಮತ್ತು ಮನ್ನಣೆಗೆ ಪ್ರಮುಖ ಶಕ್ತಿಯಾಗಿದೆಯ ನಂದಿನಿ ಪರಂಪರೆ ಬಲಪಡಿಸಲು ಮತ್ತು ಹೊಸ ಮೈಲಿಗಲ್ಲು ತಲುಪಲು ನಾವೆಲ್ಲರೂ ಒಟ್ಟಾಗಿ ಸಾಗುತ್ತೇವೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ.