ಮುಂಬೈ: ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಏರಿಕೆ ಕಂಡಿದ್ದು, ಮಂಗಳವಾರವೂ ಷೇರುಮಾರುಕಟ್ಟೆ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.40ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.47ರಷ್ಟು ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು 335.97 ಅಂಕಗಳ ಏರಿಕೆಯೊಂದಿಗೆ 83,871.32 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 120.60 ಅಂಕಗಳ ಏರಿಕೆಯೊಂದಿಗೆ 25,694.95 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಬಂಡವಾಳ ಸರಕುಗಳು ಮತ್ತು ಕೈಗಾರಿಕಾ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಬಿಇಎಲ್, ಮಹೀಂದ್ರಾ & ಮಹೀಂದ್ರಾ, ಅದಾನಿ ಪೋರ್ಟ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಎಟರ್ನಲ್ ಮತ್ತು ಇನ್ಫೋಸಿಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ.
ಅಮೆರಿಕ ಶಟ್ಡೌನ್ ತೆರವು ಎಫೆಕ್ಟ್
ಈ ಹಿಂದೆ ಅಮೆರಿಕ ಸರ್ಕಾರ ಹೇರಿದ್ದ ಶಟ್ಡೌನ್ ಅನ್ನು ಇದೀಗ ತೆರವು ಮಾಡುವ ಕುರಿತು ಮಾಹಿತಿಗಳು ಲಭ್ಯವಾಗಿದ್ದು, ಇದು ಭಾರತೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಅಮೆರಿಕ ಸರ್ಕಾರ ಶಟ್ಡೌನ್ ತೆರವು ಮಾಡುವ ನಿರೀಕ್ಷೆಯಿಂದಾಗಿ ಐಟಿ ಷೇರುಗಳು ಶೇ. 1.2 ರಷ್ಟು ಏರಿಕೆಯಾಗಿವೆ.
ಅಂತೆಯೇ ಅಮೆರಿಕ ಭಾರತದದೊಂದಿಗೆ ಮಹತ್ತ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದು, ಈ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಂದ ಮಾರುಕಟ್ಟೆಯ ವಹಿವಾಟು ಚೇತೋಹಾರಿಯಾಗಿದೆ ಎಂದು ಹೇಳಲಾಗಿದೆ. ವಿಶಾಲ ಮಾರುಕಟ್ಟೆಯಲ್ಲಿ, ಮಿಡ್‌ಕ್ಯಾಪ್‌ಗಳು 0.5% ಏರಿಕೆಯಾದರೆ ಸ್ಮಾಲ್‌ಕ್ಯಾಪ್‌ಗಳು 0.2% ಕುಸಿದವು.