ಕಳೆದ ವಾರ ಟೆಕ್ ದೈತ್ಯ ಕಂಪನಿ ಒರಾಕಲ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಮುಂಜಾನೆ 6 ಗಂಟೆಗೆ ಬಂದ ಐದು ಸಾಲಿನ ಇಮೇಲ್ ದೊಡ್ಡ ಆಘಾತ ಉಂಟುಮಾಡಿತು — “ಇಂದು ನಿಮ್ಮ ಕೊನೆಯ ಕೆಲಸದ ದಿನ ಎಂದು ಇಮೇಲ್ ಸಂದೇಶವಾಗಿತ್ತು.
ಯಾವುದೇ HR ಕರೆ ಇಲ್ಲದೆ, ಪೂರ್ವ ಸೂಚನೆ ನೀಡದೆ, ಮ್ಯಾನೇಜರ್ ಜೊತೆ ವೈಯಕ್ತಿಕ ಮಾತುಕತೆ ಇಲ್ಲದೆ ಕೆಲವೇ ಗಂಟೆಗಳಲ್ಲೇ ಭಾರತದಲ್ಲಿ ಸುಮಾರು 12,000 ಜನರು ತಮ್ಮ ಉದ್ಯೋಗ ಕಳೆದುಕೊಂಡರು. ವರ್ಷಗಳ ಶ್ರಮ, ಕೆಲವರು ದಶಕಗಳ ಕಾಲ ನಿರ್ಮಿಸಿಕೊಂಡಿದ್ದ ವೃತ್ತಿ ಕ್ಷಣಾರ್ಧದಲ್ಲಿ ಹೊರಟುಹೋಯಿತು.
ಒರಾಕಲ್ ಕಂಪೆನಿಯಲ್ಲಿನ ಈ ಭಾರೀ ಪ್ರಮಾಣದ ಉದ್ಯೋಗ ಕಡಿತವು ಇಂದಿನ ಐಟಿ ಕ್ಷೇತ್ರ ಎದುರಿಸುತ್ತಿರುವ ಅಸ್ಥಿರತೆಯನ್ನು ಬಯಲಿಗೆಳೆದಿದ್ದು, ಉದ್ಯೋಗ ಮಾರುಕಟ್ಟೆಯಲ್ಲಿ ಯುವಜನತೆ ಮಾಡುತ್ತಿರುವ ಒಂದು ಪ್ರಮುಖ ತಪ್ಪನ್ನೂ ಎತ್ತಿ ತೋರಿಸಿದೆ.
ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಅಭಿಷೇಕ್ ಸಿಂಗ್ ಎಂಬ ಬಳಕೆದಾರರು, “ಹೆಚ್ಚು ವೇತನ ಮತ್ತು ಹುದ್ದೆ ಸಿಗುತ್ತದೆ ಎಂದು ಅತಿಯಾಗಿ ಕೆಲಸ ಬದಲಾಯಿಸುವುದು ಒಂದು ಗಂಭೀರ ಸಮಸ್ಯೆ. ಹುದ್ದೆ ಮತ್ತು ಸಂಬಳ ಹೆಚ್ಚಾಗುತ್ತಾ ಹೋಗುತ್ತವೆ, ಆದರೆ ನಿಮ್ಮ ಉದ್ಯೋಗ ಅವಕಾಶಗಳ ಮಾರುಕಟ್ಟೆ ನಿಧಾನವಾಗಿ ಸೀಮಿತವಾಗುತ್ತದೆ ಎಂದು ಬರೆದಿದ್ದಾರೆ.
12 LPA, 20 LPA, 30 LPA ವೇತನ ಮಟ್ಟದಲ್ಲಿ ಅನೇಕ ಅವಕಾಶಗಳು ಸಿಗುತ್ತವೆ. ಆದರೆ 60 LPA, 80 LPA ಅಥವಾ 1 ಕೋಟಿ ಮೇಲ್ಪಟ್ಟ ಸಂಬಳಕ್ಕೆ ಬಂದಾಗ, ನಿಮ್ಮನ್ನು ನೇಮಕಾತಿ ಮಾಡುವ ಕಂಪನಿಗಳ ಸಂಖ್ಯೆ ತುಂಬಾ ಕಡಿಮೆಯಾಗುತ್ತದೆ. ಹೆಚ್ಚಿದ ಸಂಬಳ ಮತ್ತು ಉದ್ಯೋಗ ಕಡಿತ ಸೇರಿಕೊಂಡಾಗ ಅದು ಅಪಾಯಕಾರಿ ಪರಿಸ್ಥಿತಿಯನ್ನೇ ಉಂಟುಮಾಡುತ್ತದೆ ಎಂದು ಹೇಳುತ್ತಾರೆ.
ಕಂಪನಿಗಳು ವೆಚ್ಚ ಕಡಿತಗೊಳಿಸುವಾಗ, ಇತ್ತೀಚೆಗೆ ಸೇರಿರುವ ಹೆಚ್ಚಿನ ಸಂಬಳದ ಮಧ್ಯಮ ವಯಸ್ಸಿನ ಅಥವಾ ಹಿರಿಯ ಉದ್ಯೋಗಿಗಳು ಹೆಚ್ಚು ಅಪಾಯಕ್ಕೊಳಗಾಗುತ್ತಾರೆ. ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿರುವ ಮತ್ತು ಸಂಸ್ಥೆಯ ಆಳವಾದ ಜ್ಞಾನ ಹೊಂದಿರುವ ಉದ್ಯೋಗಿಗಿಂತ ಇವರಿಗೆ ಅಪಾಯ ಹೆಚ್ಚು. ಮತ್ತೊಂದು ದೊಡ್ಡ ಸಮಸ್ಯೆ ಎಂದರೆ — ಒಂದು ನಿರ್ದಿಷ್ಟ ಜೀವನಶೈಲಿಗೆ ಒಗ್ಗಿಕೊಂಡ ನಂತರ ಹಿಂದಕ್ಕೆ ಹೋಗುವುದು ಮಾನಸಿಕವಾಗಿ ಕಷ್ಟವಾಗುತ್ತದೆ ಎಂದು ಹೇಳುತ್ತಾರೆ.
ಉದ್ಯೋಗ ಮಾರುಕಟ್ಟೆಗೆ ನೀವು ಎಷ್ಟು ಶ್ರಮಪಟ್ಟಿದ್ದೀರಿ ಎಂಬುದರಿಂದ ವ್ಯತ್ಯಾಸವಾಗುವುದಿಲ್ಲ. ನಿಮ್ಮ EMI ಕಟ್ಟಲು ‘career correction’ ಬೇಕಾಗುವುದಿಲ್ಲ. ನಿಮ್ಮ ಮನಸ್ಸಿನ ಅಹಂಭಾವ ಕಡಿಮೆ ವೇತನದ ಹುದ್ದೆ ಒಪ್ಪಿಕೊಳ್ಳುವುದಿಲ್ಲ. ನಿಮ್ಮ ಕುಟುಂಬ ‘temporary step down’ ಒಪ್ಪುವುದಿಲ್ಲ. ಆದರೆ ಮಾರುಕಟ್ಟೆ ಇದನ್ನು ಪರಿಗಣಿಸುವುದಿಲ್ಲ. ಹೀಗಾಗಿ ನೀವು ಅಪಾಯಕರ ಸ್ಥಿತಿಯಲ್ಲಿ ಸಿಲುಕುತ್ತೀರಿ — ಅನೇಕ ಹುದ್ದೆಗಳಿಗೆ ನೀವು ಹೆಚ್ಚು ದುಬಾರಿ ಎನಿಸಿಕೊಳ್ಳುತ್ತೀರಿ, ಕೆಲ ನಾಯಕತ್ವ ಹುದ್ದೆಗಳಿಗೆ ನಿಮ್ಮ ಅನುಭವ ಸಾಕಾಗುವುದಿಲ್ಲ, ಹಾಗೆಂದು ಕೆಳಮಟ್ಟಕ್ಕೆ ಇಳಿಯಲು ನೀವು ಸಿದ್ಧರಿರುವುದಿಲ್ಲ ಎನ್ನುತ್ತಾರೆ.
ಇಂದಿನ ಕಠಿಣ ಉದ್ಯೋಗ ಮಾರುಕಟ್ಟೆ ಸ್ಥಿತಿಯಲ್ಲಿ ಏನು ಮಾಡಬೇಕು? ಅವರ ಸಲಹೆ ಹೀಗಿದೆ:
ಸ್ಪಷ್ಟವಾದ ಕಾರಣಗಳಿದ್ದರೆ ಮಾತ್ರ ಕೆಲಸ ಬದಲಾಯಿಸಿ
ಅಪರೂಪದ (rare) ಕೆಲಸದ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ
ನಿಮ್ಮ ಮೌಲ್ಯವು ಕಂಪೆನಿಯಲ್ಲಿ ನಿಜವಾದ ಆಳವಾದ ಜ್ಞಾನವನ್ನು ಹೊಂದಿರಲಿ
ವೇತನ ಬರುತ್ತಿರುವಾಗ ಸಾಕಷ್ಟು ಉಳಿತಾಯ ಮಾಡಿ
ಹೆಚ್ಚು ಸಂಬಳ ಶಾಶ್ವತ ಉದ್ಯೋಗದ ಭರವಸೆ ನೀಡುವುದಿಲ್ಲ, ಆರ್ಥಿಕ ಯೋಜನೆ ಬಹಳ ಮುಖ್ಯ ಎಂದು ಬಳಕೆದಾರರೊಬ್ಬರು ಹೇಳುತ್ತಾರೆ. ಮತ್ತೊಬ್ಬ ಬಳಕೆದಾರ, 80 LPA ಗಳಿಸಿದರೂ 20 LPA ಜೀವನಶೈಲಿಯನ್ನೇ ಮುಂದುವರಿಸಿದರೆ, ಹೆಚ್ಚು ಉಳಿತಾಯ ಮಾಡಬಹುದು ಮತ್ತು ಅನಿರೀಕ್ಷಿತ ಪರಿಸ್ಥಿತಿಗಳಿಗೆ ತಯಾರಾಗಿರಬಹುದು ಎಂದು ಸಲಹೆ ನೀಡಿದ್ದಾರೆ.