ಸಂಗ್ರಹ ಚಿತ್ರ 
ವಾಣಿಜ್ಯ

ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಇಂಧನ ಪೂರೈಕೆ ವ್ಯತ್ಯಯದಿಂದ ಹಣದುಬ್ಬರ ಏರಿಕೆ ಭೀತಿ; ಭಾರತದ ಆರ್ಥಿಕತೆಗೆ ಹೊಡೆತ..?

ತೈಲ ಸರಬರಾಜು ಪುನರ್‌ನಿರ್ಮಾಣದಲ್ಲಿ ವಿಳಂಬ ಹಾಗೂ ದುರ್ಬಲ ಮಳೆಗಾಲ ಒಂದೇ ವೇಳೆ ಎದುರಾದರೆ, ದರ ಏರಿಕೆ ಹೆಚ್ಚಾಗಿ ‘ಕಾಸ್ಟ್-ಪುಶ್’ ಮಾದರಿಯತ್ತ ಸಾಗುವ ಸಾಧ್ಯತೆ ಇದೆ.

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಸಂಘರ್ಷ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರಿದರೆ ಇದರಿಂದ ಹಣದುಬ್ಬರ ಏರಿಕೆಯಾಗಿ, ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಎಚ್ಚರಿಕೆ ನೀಡಿದೆ.

ಏಪ್ರಿಲ್ ತಿಂಗಳ ಆರ್ಥಿಕ ಸಮೀಕ್ಷೆಯಲ್ಲಿ ಈ ಕುರಿತು ಕಳವಳ ವ್ಯಕ್ತಪಡಿಸಲಾಗಿದೆ. ಗಲ್ಫ್ ಪ್ರದೇಶದಲ್ಲಿ ತೈಲ ಮತ್ತು ಅನಿಲ ಉತ್ಪಾದನೆ ಹಾಗೂ ಸರಬರಾಜು ಮೂಲಸೌಕರ್ಯಗಳಿಗೆ ಹಾನಿಯಾದರೆ, ಅವುಗಳನ್ನು ಪುನರ್‌ನಿರ್ಮಿಸಲು ಹಲವು ತಿಂಗಳುಗಳ ಕಾಲ ಬೇಕಾಗಬಹುದು. ಈ ವಿಳಂಬ ಮುಂದುವರಿದರೆ, ಇಂಧನದ ಲಭ್ಯತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಇದೇ ವೇಳೆ, ಹವಾಮಾನ ವೈಪರಿತ್ಯಗಳ ಪರಿಣಾಮವಾಗಿ ಖರೀಫ್ ಬೆಳೆ ಉತ್ತಮವಾಗಿ ಬರದಿದ್ದರೆ, ದರ ಏರಿಕೆಯ ಒತ್ತಡ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದೆ.

ಹವಾಮಾನ ಇಲಾಖೆ ಎಲ್ ನಿನೋ ಪರಿಸ್ಥಿತಿಯ ಸಾಧ್ಯತೆಯನ್ನೂ ಸೂಚಿಸಿದ್ದು, ಇದರಿಂದ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತೈಲ ಸರಬರಾಜು ಪುನರ್‌ನಿರ್ಮಾಣದಲ್ಲಿ ವಿಳಂಬ ಹಾಗೂ ದುರ್ಬಲ ಮಳೆಗಾಲ ಒಂದೇ ವೇಳೆ ಎದುರಾದರೆ, ದರ ಏರಿಕೆ ಹೆಚ್ಚಾಗಿ ‘ಕಾಸ್ಟ್-ಪುಶ್’ ಮಾದರಿಯತ್ತ ಸಾಗುವ ಸಾಧ್ಯತೆ ಇದೆ. ಅಂದರೆ, ಉತ್ಪಾದನಾ ವೆಚ್ಚ ಹೆಚ್ಚಾದಂತೆ ಕಂಪನಿಗಳು ಅದರ ಭಾರವನ್ನು ಗ್ರಾಹಕರ ಮೇಲೆ ಹಾಕುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಹಣಕಾಸು ಸಚಿವಾಲಯದ ಪ್ರಕಾರ, ಭಾರತವು 2026-27 ಆರ್ಥಿಕ ವರ್ಷವನ್ನು ಬಲವಾದ ಆಂತರಿಕ ಅಂಶಗಳೊಂದಿಗೆ ಪ್ರವೇಶಿಸುತ್ತಿದ್ದರೂ, ಹೊರಗಿನ ಸವಾಲುಗಳು ಹೆಚ್ಚಾಗಿವೆ. ಕಳೆದ ಆರ್ಥಿಕ ವರ್ಷದಲ್ಲಿ 7.6 ಶೇಕಡಾ ಜಿಡಿಪಿ ಬೆಳವಣಿಗೆ ಸಾಧನೆಯಾಗಿದ್ದು, ಮುಂದಿನ ವರ್ಷಕ್ಕೆ 7 ರಿಂದ 7.4 ಶೇಕಡಾ ಬೆಳವಣಿಗೆ ನಿರೀಕ್ಷಿಸಲಾಗಿದೆ.

ಆದರೆ, ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾಗಿರುವ ಅನಿಶ್ಚಿತತೆ ಆರ್ಥಿಕ ದೃಷ್ಟಿಕೋನವನ್ನು ಮಸುಕುಗೊಳಿಸಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅವಲಂಬಿತ ಕ್ಷೇತ್ರಗಳಿಗೆ ಇದರ ಪರಿಣಾಮ ವ್ಯಾಪಕವಾಗಲಿದೆ. ಇಂಧನದ ಬೆಲೆ ಏರಿಕೆಯಿಂದ ಅನೇಕ ಕೈಗಾರಿಕೆಗಳಿಗೆ ಹೊರೆ ಹೆಚ್ಚುವ ಸಾಧ್ಯತೆ ಇದೆ.

ಇದಲ್ಲದೆ, ಈ ಸಂಘರ್ಷದಿಂದ ವ್ಯಾಪಾರ ಮತ್ತು ಹಣಕಾಸು ಹರಿವಿಗೂ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದೂ ಸಚಿವಾಲಯ ತಿಳಿಸಿದೆ. ಆದರೂ ದೇಶದ ಬಲವಾದ ನೀತಿಗಳ ಬೆಂಬಲ, ಸ್ಥಿರ ಹಣಕಾಸು ವ್ಯವಸ್ಥೆ ಹಾಗೂ ಸಾರ್ವಜನಿಕ ಹೂಡಿಕೆ ಕೆಲವು ಮಟ್ಟಿಗೆ ರಕ್ಷಣೆ ನೀಡಬಹುದು ಎಂದು ಸಚಿವಾಲಯ ತಿಳಿಸಿದೆ.

ಆದಾಗ್ಯೂ, ಇಂಧನ ಮತ್ತು ರಸಗೊಬ್ಬರ ಸರಬರಾಜಿನಲ್ಲಿ ವ್ಯತ್ಯಯ ಮುಂದುವರಿದರೆ, ಈ ರಕ್ಷಣೆ ಸಾಕಾಗುತ್ತದೆಯೇ ಎಂಬುದು ಅನುಮಾನವಾಗಿದೆ. ಜೊತೆಗೆ, ಎಲ್ ನಿನೋ ಪರಿಣಾಮದಿಂದ ಮಳೆಯ ಕೊರತೆ ಉಂಟಾದರೆ, ದರ ಏರಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಹಾಗೂ ಆರ್ಥಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾರ್ವಜನಿಕವಾಗಿ ನನ್ನನ್ನು ಬಂಧಿಸಿ ಅವಮಾನಿಸುವ ಅಗತ್ಯವಿಲ್ಲ: ಪವನ್ ಖೇರಾ, ತೀರ್ಪು ಕಾಯ್ದಿರಿಸಿದ ಸುಪ್ರೀಂ

ಪ. ಬಂಗಾಳದ 77 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ದೂರು: ಚುನಾವಣಾ ಆಯೋಗದಿಂದ ಪರಿಶೀಲನೆ!

ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ; Video

ಎಲ್ಲಾ ಸರ್ಕಾರಿ ಆಸ್ಪತ್ರೆ ಕಟ್ಟಡಗಳ ಕ್ಷಮತೆ ಪರಿಶೀಲನೆಗೆ ನಿರ್ದೇಶನ; ಭಾರೀ ಮಳೆ ನಿರೀಕ್ಷೆ ಇರಲಿಲ್ಲ, ಇದ್ದಕ್ಕಿದ್ದಂತೆ ಜೋರಾಗಿ ಬಂತು: ಪರಮೇಶ್ವರ್

IPL 2026: ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ 'ನಿಜಕ್ಕೂ AI?' ಎಲಾನ್ ಮಸ್ಕ್ ಈ ಮಾಂತ್ರಿಕನನ್ನು ಸೃಷ್ಟಿಸಿದರೇ?

SCROLL FOR NEXT