Renting House: ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೀರಾ? ಮನೆ ಇಷ್ಟವಾಯಿತೆಂದು ತಕ್ಷಣವೇ ಬಾಡಿಗೆಗೆ ಪಡೆಯುವ ಮುನ್ನ, ಬಾಡಿಗೆ ಮೊತ್ತದಿಂದ ಹಿಡಿದು ಅಡ್ವಾನ್ಸ್ ಹಣ, ಅಗ್ರಿಮೆಂಟ್ ಹೀಗೆ ಇತರ ನಿಯಮಗಳವರೆಗೆ ಎಲ್ಲವನ್ನೂ ಪರಿಶೀಲಿಸುವುದು ಬಹಳ ಮುಖ್ಯ. ಯಾಕಂದ್ರೆ, ಸಣ್ಣ ತಪ್ಪು ಕೂಡ ಮುಂದೆ ಅನಗತ್ಯ ಹಣಕಾಸಿನ ಹೊರೆಯಾಗಬಹುದು. ಹೀಗಾಗಿ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆಯುವಾಗ ಯಾವ ವಿಷಯಗಳಿಗೆ ಹೆಚ್ಚು ಗಮನ ಕೊಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ:
ಬಾಡಿಗೆ ಮತ್ತು ಡೆಪಾಸಿಟ್ (ಅಡ್ವಾನ್ಸ್) ಬಗ್ಗೆ ಸ್ಪಷ್ಟತೆ ಇದೆಯೇ?
ತಿಂಗಳ ಬಾಡಿಗೆ ಎಷ್ಟು ಮತ್ತು ಪ್ರತಿ ವರ್ಷ ಎಷ್ಟು ಪ್ರತಿಶತ ಹೆಚ್ಚಾಗುತ್ತದೆ ಎಂದು ಕೇಳಿ. ಸಾಮಾನ್ಯವಾಗಿ 5 ರಿಂದ 10 ಪ್ರತಿಶತ ಹೆಚ್ಚಾಗುತ್ತದೆ. ಸೆಕ್ಯುರಿಟಿ ಡೆಪಾಸಿಟ್ ಎಷ್ಟು ತಿಂಗಳ ಬಾಡಿಗೆ ಮತ್ತು ಮನೆ ಖಾಲಿ ಮಾಡುವಾಗ ಯಾವಾಗ ವಾಪಸ್ ಕೊಡುತ್ತಾರೆ ಎಂದು ಲಿಖಿತವಾಗಿ ತಿಳಿದುಕೊಳ್ಳಿ. ಬಾಯಿ ಮಾತಿನ ಮೇಲೆ ನಂಬಬೇಡಿ.
ನೀರು ಮತ್ತು ವಿದ್ಯುತ್ ಬಿಲ್ ಯಾರ ಹೆಸರಿನಲ್ಲಿ ಇದೆ?
24 ಗಂಟೆ ನೀರು ಸಿಗುತ್ತಾ, ಬೋರ್ವೆಲ್ ನೀರು ಅಥವಾ ಕಾರ್ಪೋರೇಷನ್ ನೀರು ಎಂದು ಕೇಳಿ. ವಿದ್ಯುತ್ ಮೀಟರ್ ಪ್ರತ್ಯೇಕ ಇದೆಯಾ ಅಥವಾ ಹಂಚಿಕೊಂಡಿದೆಯಾ ಎಂದು ತಿಳಿದುಕೊಳ್ಳಿ. ಕಾಮನ್ ಬಿಲ್ ಇದ್ದರೆ ಜಗಳ ಆಗುವ ಸಾಧ್ಯತೆ ಇರುತ್ತದೆ. ವಿದ್ಯುತ್ ಮತ್ತು ನೀರಿನ ಬಿಲ್ ತಿಂಗಳಿಗೆ ಸರಾಸರಿ ಎಷ್ಟು ಬರುತ್ತದೆ ಎಂದು ಹಿಂದಿನ ಬಾಡಿಗೆದಾರರನ್ನು ಕೇಳಬಹುದು.
ನಿರ್ವಹಣೆ ಮತ್ತು ರಿಪೇರಿ ಯಾರ ಜವಾಬ್ದಾರಿ?
ಪೈಪ್ ಲೀಕ್, ಸ್ವಿಚ್ ರಿಪೇರಿ, ಪೇಂಟ್, ಮೋಟಾರ್ ಸಮಸ್ಯೆ ಬಂದಾಗ ಯಾರು ಖರ್ಚು ಮಾಡುತ್ತಾರೆ ಎಂದು ಸ್ಪಷ್ಟಪಡಿಸಿಕೊಳ್ಳಿ. ಸಾಮಾನ್ಯವಾಗಿ 500 ರೂಪಾಯಿಯೊಳಗಿನ ಸಣ್ಣ ರಿಪೇರಿ ಬಾಡಿಗೆದಾರರದ್ದು ಮತ್ತು ದೊಡ್ಡ ರಿಪೇರಿ ಮಾಲೀಕರದ್ದು ಎಂದು ಒಪ್ಪಂದ ಮಾಡಿಕೊಳ್ಳಿ.
ಅಗ್ರಿಮೆಂಟ್ ಮತ್ತು ಪೋಲಿಸ್ ವೆರಿಫಿಕೇಷನ್ ಆಗುತ್ತಾ?
11 ತಿಂಗಳಿಗಿಂತ ಹೆಚ್ಚು ಇದ್ದರೆ ರಿಜಿಸ್ಟರ್ ಅಗ್ರಿಮೆಂಟ್ ಮಾಡಿಸಿಕೊಳ್ಳಿ. ಅಗ್ರಿಮೆಂಟ್ ನಲ್ಲಿ ಬಾಡಿಗೆ, ಡೆಪಾಸಿಟ್, ನೋಟಿಸ್ ಪಿರಿಯಡ್ ಎಲ್ಲವೂ ಇರಬೇಕು. ಜೊತೆಗೆ ಪೋಲಿಸ್ ಸ್ಟೇಷನ್ ನಲ್ಲಿ ಬಾಡಿಗೆದಾರರ ಮಾಹಿತಿ ಕೊಡುವುದು ಕಡ್ಡಾಯ. ಇದರಿಂದ ಎರಡೂ ಕಡೆ ಸುರಕ್ಷತೆ ಇರುತ್ತದೆ.
ಇದರೊಂದಿಗೆ, ಪಾರ್ಕಿಂಗ್ ಸೌಲಭ್ಯ ಇದೆಯಾ, ಪಿಇಟಿ ಇಟ್ಟುಕೊಳ್ಳಲು ಅವಕಾಶ ಇದೆಯಾ, ಅತಿಥಿಗಳು ಬರಲು ಯಾವುದೇ ನಿರ್ಬಂಧ ಇದೆಯಾ, ನೋಟಿಸ್ ಪಿರಿಯಡ್ ಎಷ್ಟು ದಿನ ಎಂದು ಕೇಳಿ. ಸಾಮಾನ್ಯವಾಗಿ 1 ರಿಂದ 2 ತಿಂಗಳ ನೋಟಿಸ್ ಇರುತ್ತದೆ. ಜೊತೆಗೆ ಮನೆ ಮಾಲೀಕರ ಹೆಸರಿನಲ್ಲಿ ಇದೆಯಾ ಮತ್ತು ಬಾಡಿಗೆಗೆ ಕೊಡಲು ಕಾನೂನು ಸಮಸ್ಯೆ ಇಲ್ಲವೇ ಎಂದು ಡಾಕ್ಯುಮೆಂಟ್ ನೋಡಿ.