ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ ನೀಡಿದ್ದಾರೆ. ತಮ್ಮ ಹಾಲಿ ಅಧಿಕಾರಾವಧಿ 2027ರ ಫೆಬ್ರವರಿ 20ರಂದು ಕೊನೆಗೊಂಡ ಬಳಿಕ ಮರುನೇಮಕ ಬಯಸುವುದಿಲ್ಲ ಎಂದು ಬುಧವಾರ ತಿಳಿಸಿದ್ದಾರೆ.
180 ಬಿಲಿಯನ್ ಡಾಲರ್ ಮೌಲ್ಯದ ಟಾಟಾ ಸಮೂಹದ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್ ಆಗಸ್ಟ್ 18ರಂದು ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಸಿದ್ಧವಾಗಿದೆ. ಇದೇ ವೇಳೆ, ಟ್ರಸ್ಟ್‌ಗಳು ತಮ್ಮ ಮೂರನೇ ಮಂಡಳಿ ಸದಸ್ಯರನ್ನು ನಾಮನಿರ್ದೇಶನ ಮಾಡುವ ವಿಚಾರದಲ್ಲಿ ಅನಿಶ್ಚಿತತೆ ಮುಂದುವರಿದಿದೆ.
ಸದಸ್ಯರು ನಿಯಂತ್ರಕ ನಿರ್ಬಂಧಗಳನ್ನು ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ, ಚಂದ್ರಶೇಖರನ್ ಅವರನ್ನು ನಿರ್ದೇಶಕರಾಗಿ ಮರುನೇಮಕ ಮಾಡುವುದು ಅಸಾಧ್ಯವಾಗಿತ್ತು. ಕಂಪನಿಯ ಬೈಲಾಗಳ ಪ್ರಕಾರ, ಎಲ್ಲ ನೇಮಕಾತಿಗಳಿಗೂ ಸರ್ವಾನುಮತದ ಒಪ್ಪಿಗೆ ಅಗತ್ಯವಾಗಿದೆ.
ಇಂದು ಬಿಡುಗಡೆ ಮಾಡಿದ ಸಾರ್ವಜನಿಕ ಹೇಳಿಕೆಯಲ್ಲಿ ಚಂದ್ರಶೇಖರನ್, ಆರು ತಿಂಗಳು ಕಳೆದರೂ ನನ್ನ ಮರುನೇಮಕದ ಪ್ರಸ್ತಾವನೆ ಮುಂದುವರಿಯಲಿಲ್ಲ. ಮಂಡಳಿಯ ಒಬ್ಬ ಸದಸ್ಯರು ಪ್ರಸ್ತಾವನೆಯನ್ನು ವಿರೋಧಿಸಿದ್ದರಿಂದ, 2027ರ ಫೆಬ್ರವರಿ 20ರಂದು ನನ್ನ ಅಧಿಕಾರಾವಧಿ ಮುಕ್ತಾಯಗೊಂಡಾಗ ಮರುನೇಮಕಕ್ಕೆ ನನ್ನನ್ನು ಪರಿಗಣಿಸಿಕೊಳ್ಳಲು ನಾನು ಮುಂದಾಗದಿರಲು ನಿರ್ಧರಿಸಿದ್ದೇನೆ. ಉತ್ತರಾಧಿಕಾರಿ ಅಧ್ಯಕ್ಷರನ್ನು ಇಂದೇ ಬೆಳಗ್ಗೆ ಆಯ್ಕೆ ಮಾಡುವಂತೆ ಟಾಟಾ ಸನ್ಸ್ ಮಂಡಳಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ತಮ್ಮ ನಿರ್ಧಾರದ ಕಾರಣವನ್ನು ವಿವರಿಸಿದ ಅವರು, ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ಗಳು ತಮ್ಮ ಅಧಿಕಾರಾವಧಿಯನ್ನು ಐದು ವರ್ಷಗಳ ಕಾಲ ವಿಸ್ತರಿಸುವಂತೆ ಸರ್ವಾನುಮತದಿಂದ ನಿರ್ಧರಿಸಿ ಶಿಫಾರಸು ಮಾಡಿದ್ದರು. ಬಳಿಕ ಈ ಪ್ರಸ್ತಾವನೆಯನ್ನು ಟಾಟಾ ಸನ್ಸ್‌ನ ನಾಮನಿರ್ದೇಶನ ಮತ್ತು ವೇತನ ಸಮಿತಿ ಹಾಗೂ ಮಂಡಳಿಯು ದಾಖಲಿಸಿ ಶಿಫಾರಸು ಮಾಡಿತ್ತು. 2026ರ ಫೆಬ್ರವರಿ 24ರಂದು ಈ ಪ್ರಸ್ತಾವನೆಯನ್ನು ಟಾಟಾ ಸನ್ಸ್ ಮಂಡಳಿಯ ಮುಂದೆ ಮಂಡಿಸಲಾಗಿತ್ತು.
ಆದರೆ, ಟಾಟಾ ಟ್ರಸ್ಟ್‌ಗಳ ಅಧ್ಯಕ್ಷ ನೋಯೆಲ್ ಟಾಟಾ ಅವರು ಇದಕ್ಕೆ ಬೆಂಬಲ ನೀಡದ ಕಾರಣ ಪ್ರಸ್ತಾವನೆ ಜಾರಿಗೆ ಬರಲಿಲ್ಲ. ಸರ್ವಾನುಮತದ ಬೆಂಬಲ ಇಲ್ಲದ ಹಿನ್ನೆಲೆಯಲ್ಲಿ ನಾನು ನಿರ್ಧಾರವನ್ನು ಮುಂದೂಡಲು ಆಯ್ಕೆ ಮಾಡಿಕೊಂಡೆ. ಮಂಡಳಿ ಸಭೆ ನಡೆದು ಈಗ ಆರು ತಿಂಗಳು ಕಳೆದಿವೆ. ಆದರೆ, ಇಂದಿನವರೆಗೂ ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.
ಟಾಟಾ ಸನ್ಸ್ ಅತ್ಯಂತ ದೊಡ್ಡ ಸಂಸ್ಥೆಯಾಗಿದ್ದು, ಹಲವು ಪ್ರಮುಖ ಕಾರ್ಯತಂತ್ರದ ಯೋಜನೆಗಳು ನಿರ್ಣಾಯಕ ಹಂತದಲ್ಲಿ ಅನುಷ್ಠಾನಗೊಳ್ಳುತ್ತಿವೆ. 2027ರ ಫೆಬ್ರವರಿ ನಂತರ ಸಮೂಹವನ್ನು ಮುನ್ನಡೆಸಲು ನಾಯಕತ್ವವನ್ನು ಹೊಂದಿರುವುದು ಮಾತ್ರವಲ್ಲದೆ, ಉದ್ಯೋಗಿಗಳು, ಹೂಡಿಕೆದಾರರು, ಪಾಲುದಾರರು ಹಾಗೂ ಇತರ ಪಾಲುದಾರರಿಗೆ ನಾಯಕತ್ವದ ಕುರಿತು ಸ್ಪಷ್ಟತೆ ನೀಡುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಟಾಟಾ ಸಮೂಹದಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಚಂದ್ರಶೇಖರನ್ , 2017ರಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾದರು. ಇದಕ್ಕೂ ಮುನ್ನ ಅವರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ತಿರುಚಿಯ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪೂರ್ಣಗೊಳಿಸಿದ ಬಳಿಕ TCSಗೆ ಸೇರಿದ್ದರು. 2016ರ ಅಕ್ಟೋಬರ್‌ನಲ್ಲಿ ಮಂಡಳಿಯ ಆಂತರಿಕ ಬೆಳವಣಿಗೆಗಳ ಬಳಿಕ ಟಾಟಾ ಸಮೂಹ ಸೈರಸ್ ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ ನಂತರ, ರತನ್ ಟಾಟಾ ಅವರು ವೈಯಕ್ತಿಕವಾಗಿ ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು.
ಆ ಸಮಯದಲ್ಲಿ ಚಂದ್ರಶೇಖರನ್ ಟಾಟಾ ಸಮೂಹದ ಪ್ರಮುಖ ಸಂಸ್ಥೆಯಾದ TCSನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಅವರ ನಾಯಕತ್ವದಲ್ಲಿ TCS ಇಂದಿನ ಮಟ್ಟಕ್ಕೆ ಬೆಳೆಯಿತು.
ಚಂದ್ರಶೇಖರನ್ ಅವರ ಟಾಟಾ ಸನ್ಸ್ ಅಧ್ಯಕ್ಷತೆಯ ಅವಧಿಯಲ್ಲಿ ಸಮೂಹದ ಲಾಭ ಮತ್ತು ಆದಾಯ ಮೂರು ಪಟ್ಟು ಹೆಚ್ಚಾಗಿದ್ದು, ಹಲವು ಕಾರ್ಯತಂತ್ರದ ಮಹತ್ವದ ಕ್ಷೇತ್ರಗಳಿಗೂ ಟಾಟಾ ಸಮೂಹ ಪ್ರವೇಶಿಸಿತು.
ಈ ಗೌರವಾನ್ವಿತ ಸಂಸ್ಥೆಗೆ ಕೊಡುಗೆ ನೀಡಲು ನನಗೆ ಅಪಾರ ತೃಪ್ತಿ ನೀಡಿದ ಅವಕಾಶವನ್ನು ಒದಗಿಸಿದ್ದಕ್ಕಾಗಿ ಟಾಟಾ ಸಮೂಹಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಕಳೆದ ಒಂದು ದಶಕದಲ್ಲಿ ಟಾಟಾ ಸನ್ಸ್ ನ್ನು ಮುನ್ನಡೆಸಿರುವುದು ನನಗೆ ದೊಡ್ಡ ಗೌರವ ಮತ್ತು ಆಳವಾದ ಜವಾಬ್ದಾರಿಯ ಅನುಭವವಾಗಿದೆ ಎಂದು ತಿಳಿಸಿದ್ದಾರೆ.