ಹಣ ಉಳಿಸುವುದು ಭಾರತೀಯರ ರಕ್ತದಲ್ಲೇ ಬೆರೆತುಹೋಗಿರುವ ಒಂದು ಗುಣ. ಆದರೆ, ಕೇವಲ ಬ್ಯಾಂಕ್ ಲಾಕರ್ ಅಥವಾ ಮನೆಯ ಬಿರುವಿನಲ್ಲಿ ಹಣ ಕೂಡಿಡುವ ಕಾಲ ಈಗ ಬದಲಾಗಿದೆ. ಯಾಕಂದ್ರೆ, ಭಾರತದ ಹೂಡಿಕೆ ಮಾರುಕಟ್ಟೆಯಲ್ಲಿ ನಿಶ್ಯಬ್ದ ಕ್ರಾಂತಿಯೊಂದು ನಡೆಯುತ್ತಿದ್ದು, ಜನರ ಹಣಕಾಸಿನ ಆದ್ಯತೆಗಳು ಅಚ್ಚರಿಯ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿವೆ. ಹಾಗಾಗಿ, ಶತಮಾನಗಳಿಂದ ನಮ್ಮ ಹಿರಿಯರು ನಂಬಿಕೊಂಡು ಬಂದ ಚಿನ್ನ ಮತ್ತು ಭೂಮಿಯ ಮೇಲಿನ ವ್ಯಾಮೋಹ ಕಡಿಮೆಯಾಗಿದೆಯಾ? ಅಥವಾ ಯುವಜನತೆಯ ಹೊಸ ಕ್ರೇಜ್ ಆಗಿರುವ ಷೇರುಪೇಟೆ ಮತ್ತು ಮ್ಯೂಚುಯಲ್ ಫಂಡ್‌ಗಳು ಎಲ್ಲವನ್ನೂ ಹಿಂದಿಕ್ಕಿವೆಯಾ? ಭಾರತೀಯರ ಕೋಟ್ಯಂತರ ರೂಪಾಯಿ ಹಣ ಸದ್ಯ ಯಾವ ವಲಯಕ್ಕೆ ಹೆಚ್ಚು ಹರಿಯುತ್ತಿದೆ? ಇಲ್ಲಿದೆ ಆ ಕುರಿತ ಇಂಟರೆಸ್ಟಿಂಗ್ ವರದಿ:
ಷೇರುಪೇಟೆ ಮತ್ತು ಮ್ಯೂಚುಯಲ್ ಫಂಡ್
ಪ್ರಸ್ತುತ ಭಾರತದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಭಾರಿ ಜಾಗೃತಿ ಮೂಡಿಸಿದೆ. ಅದರಂತೆ, ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಹೂಡಿಕೆ ಮಾಡುವವರ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿದೆ. ಅದರಲ್ಲೂ, ವಿಶೇಷವಾಗಿ ಯುವಜನತೆ ಮತ್ತು ಉದ್ಯೋಗಿಗಳಲ್ಲಿ ಮಾಸಿಕ SIP (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್) ಸಂಸ್ಕೃತಿ ತೀವ್ರವಾಗಿ ಹೆಚ್ಚಿದ್ದು, ಡಿಮ್ಯಾಟ್ ಖಾತೆಗಳ ಸಂಖ್ಯೆ ದಾಖಲೆ ಮಟ್ಟ ತಲುಪಿದೆ. ಹೀಗೆ, ಹೂಡಿಕೆ ಮಾಡುವವರ ಪಾಲು ಭಾರತೀಯ ಹೂಡಿಕೆ ಮಾರುಕಟ್ಟೆಯಲ್ಲಿ ಶೇ. 8 ರಷ್ಟಿದೆ ಎನ್ನಲಾಗಿದೆ. ಅದರಂತೆ, ಸದ್ಯ ಭಾರತದಲ್ಲಿ ಪ್ರತಿ ತಿಂಗಳು SIP ಮೂಲಕ ಹೂಡಿಕೆಯಾಗುವ ಮೊತ್ತ ₹20,000 ಕೋಟಿಗೂ ಅಧಿಕ ದಾಖಲೆಯ ಮಟ್ಟವನ್ನು ತಲುಪಿದೆ. ಈ ಪೈಕಿ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಭಾಗದ ಜನರೂ ಸಹ ತಿಂಗಳಿಗೆ ₹500 ಅಥವಾ ₹1000 ನಂತೆ ಹೂಡಿಕೆ ಮಾಡುತ್ತಿದ್ದಾರೆ. ಏತನ್ಮಧ್ಯೆ, ದೀರ್ಘಾವಧಿಯಲ್ಲಿ (5 ರಿಂದ 10 ವರ್ಷ) ಈ ವಲಯವು ಸರಾಸರಿ ಶೇ. 12 ರಿಂದ 15% ರಷ್ಟು ವಾರ್ಷಿಕ ಲಾಭವನ್ನು ನೀಡಿದೆ, ಇದು ಬ್ಯಾಂಕ್ ಬಡ್ಡಿಗಿಂತ ದುಪ್ಪಟ್ಟಾಗಿದೆ. ಇನ್ನು, ಭಾರತದಲ್ಲಿ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ 15 ಕೋಟಿ ದಾಟಿರುವುದೇ ಅದಕ್ಕೆ ಸಾಕ್ಷಿ.
ಬ್ಯಾಂಕ್ ಎಫ್‌ಡಿ ಮತ್ತು ಉಳಿತಾಯ
ಹಿರಿಯ ನಾಗರಿಕರು ಮತ್ತು ರಿಸ್ಕ್ ತೆಗೆದುಕೊಳ್ಳದ ಮಧ್ಯಮ ವರ್ಗದವರ ನೆಚ್ಚಿನ ಆಯ್ಕೆ ಬ್ಯಾಂಕ್ ಎಫ್‌ಡಿ ಮತ್ತು ಉಳಿತಾಯ ಖಾತಯಾಗಿದೆ. ಯಾಕೆಂದರೆ, ಖಾತರಿಯ ಆದಾಯ ಮತ್ತು ಸುರಕ್ಷತೆಯೇ ಇದರ ಪ್ರಮುಖ ಆಕರ್ಷಣೆ. ಹಾಗಾಗಿಯೇ, ಯಾವ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ, ಯಾವ ಬ್ಯಾಂಕ್ ನಮ್ಮ ಹಣಕ್ಕೆ ಸೇಫ್ ಹೀಗೆ ಎಲ್ಲವನ್ನೂ ನೋಡಿ ಅಂದಾಜು ಮಾಡಿಯೇ ಹೂಡಿಕೆ ಮಾಡುತ್ತಾರೆ. ಅದರಂತೆ, ಶೇ. 20 ರಷ್ಟು ಭಾರತೀಯರು ಇಂದಿಗೂ ಕೂಡ ತಮ್ಮ ಹಣವನ್ನ ಬ್ಯಾಂಕ್ ಠೇವಣಿಗಳಲ್ಲಿಯೇ ಹೂಡಿಕೆ ಮಾಡುತ್ತಾರೆ.
ಪ್ರಾವಿಡೆಂಟ್ ಫಂಡ್ ಮತ್ತು ವಿಮೆ
ಭಾರತದ ಹೂಡಿಕೆ ಮಾರುಕಟ್ಟೆಯಲ್ಲಿ ಪ್ರಾವಿಡೆಂಟ್ ಫಂಡ್ ಮತ್ತು ವಿಮೆ ವಲಯದ ಪಾಲು ಶೇ. 7 ರಷ್ಟಿದೆ. ಅದರಲ್ಲೂ, ಇಪಿಎಫ್ ಸಂಬಳದಿಂದಲೇ ಕಟ್ ಆಗುವುದರಿಂದ ಮತ್ತು ಪಿಪಿಎಫ್/ವಿಮೆಗಳು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಕಟ್ಟಬೇಕಿರುವುದರಿಂದ ಜನರಲ್ಲಿ ನಿಯಮಿತ ಉಳಿತಾಯದ ಶಿಸ್ತು ಮೂಡುತ್ತದೆ. ಇದರೊಂದಿಗೆ, ಸೆಕ್ಷನ್ 80C ಅಡಿಯಲ್ಲಿ ವಾರ್ಷಿಕ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಲು ಹೆಚ್ಚಿನ ಭಾರತೀಯರು ಕೊನೆಯ ಕ್ಷಣದಲ್ಲಿ ಆಯ್ಕೆ ಮಾಡಿಕೊಳ್ಳುವುದು ಇದೇ ಇಪಿಎಫ್, ಪಿಪಿಎಫ್ ಮತ್ತು ಎಲ್‌ಐಸಿ ಪ್ರೀಮಿಯಂಗಳನ್ನು. ಅದರಲ್ಲೂ, ತಮಗೆ ಏನಾದರೂ ತೊಂದರೆಯಾದರೆ ಕುಟುಂಬ ಬೀದಿಗೆ ಬೀಳಬಾರದು ಎಂಬ ಜವಾಬ್ದಾರಿ ಮತ್ತು ವಯಸ್ಸಾದಾಗ ಯಾರ ಮುಂದೆಯೂ ಕೈಚಾಚಬಾರದು ಎಂಬ ಸ್ವಾಭಿಮಾನದ ಆಲೋಚನೆ ಈ ಹೂಡಿಕೆಯ ಹಿಂದಿನ ಪ್ರಮುಖ ಶಕ್ತಿಯಾಗಿದೆ.
ಯಾರೇ ಬಂದರು ರಿಯಲ್ ಎಸ್ಟೇಟ್/ ಚಿನ್ನವೇ ಕಿಂಗ್!
ಹೌದು, ಜನರ ಹೂಡಿಕೆಯ ಆದ್ಯತೆಗಳು ವೇಗವಾಗಿ ಬದಲಾಗುತ್ತಿದ್ದರು, ಭಾರತೀಯರು ಮಾತ್ರ ತಮ್ಮ ಹಣವನ್ನು ರಿಯಲ್ ಎಸ್ಟೇಟ್ ಹಾಗೂ ಚಿನ್ನದ ಮೇಲೆಯೆ ಇನ್ನು ನಂಬಿಕೆ ಇಟ್ಟಿದ್ದಾರೆ. ಅದರಂತೆ, ಭಾರತೀಯ ಕುಟುಂಬಗಳ ಒಟ್ಟು ಸಂಪತ್ತಿನ ಬಹುಪಾಲು (ಸುಮಾರು 50% ಕ್ಕೂ ಹೆಚ್ಚು) ಇನ್ನೂ ರಿಯಲ್ ಎಸ್ಟೇಟ್‌ನಲ್ಲೇ ಇದೆ. ಯಾಕಂದ್ರೆ, ದೀರ್ಘಾವಧಿಯ ಬಂಡವಾಳ ವೃದ್ಧಿ ಮತ್ತು ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಇದು ಮೊದಲ ಆದ್ಯತೆಯಾಗಿ ಉಳಿದಿರುವುದೇ ಇದಕ್ಕೆ ಕಾರಣ. ಜೊತೆಗೆ, ಸಾಂಸ್ಕೃತಿಕ ಮಹತ್ವ ಮತ್ತು ಹಣದುಬ್ಬರದ ವಿರುದ್ಧ ರಕ್ಷಣೆಯಾಗಿ ಚಿನ್ನ ಎರಡನೇ ಸ್ಥಾನದಲ್ಲಿದೆ ಅಂದರೆ, ಸುಮಾರು 15% - 18% ಭಾರತೀಯರು ಚಿನ್ನದ ಮೇಲೆಯೇ ಇನ್ನೂ ಕೂಡ ನಂಬಿಕೆ ಇಟ್ಟಿದ್ದಾರೆ. ಅದರಲ್ಲೂ, ಇತ್ತೀಚೆಗೆ ಆಭರಣಗಳ ಜೊತೆಗೆ ಡಿಜಿಟಲ್ ಗೋಲ್ಡ್ ಮತ್ತು ಗೋಲ್ಡ್ ಇಟಿಎಫ್‌ಗಳತ್ತ ಒಲವು ಹೆಚ್ಚುತ್ತಿದೆ.
ಹಾಗಾದ್ರೆ, ಪ್ರಸ್ತುತ ಮಾರುಕಟ್ಟೆಯ ಟ್ರೆಂಡ್ ಹೇಗಿದೆ?
ಜನರು ಭೂಮಿ ಮತ್ತು ಚಿನ್ನದಂತಹ ಭೌತಿಕ ಆಸ್ತಿಗಳಿಂದ ಮ್ಯೂಚುವಲ್ ಫಂಡ್, ಬಾಂಡ್‌ಗಳಂತಹ ಹಣಕಾಸು ಆಸ್ತಿಗಳ ಕಡೆಗೆ ವೇಗವಾಗಿ ಮುಖ ಮಾಡುತ್ತಿದ್ದಾರೆ. ಅದರಲ್ಲೂ, ಮೊಬೈಲ್ ಆಪ್‌ಗಳ ಮೂಲಕ ಕೇವಲ ₹100 ಇದ್ದರೂ ಹೂಡಿಕೆ ಮಾಡಬಹುದಾದ ಸೌಲಭ್ಯ ಇರುವುದರಿಂದ ಹೂಡಿಕೆದಾರರ ಸಂಖ್ಯೆ ಹಳ್ಳಿ ಹಳ್ಳಿಗಳಿಗೂ ತಲುಪುತ್ತಿದೆ.