ನವದೆಹಲಿ: ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಬಹಿರಂಗಪಡಿಸದ ಭಾರೀ ಮೊತ್ತಕ್ಕೆ ಉಳಿದ ಶೇ. 24 ರಷ್ಟು ಪಾಲನ್ನು ಖರೀದಿಸುವ ಮೂಲಕ ಸುದ್ದಿ ಸಂಸ್ಥೆ IANSನ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿದೆ.
ಗ್ರೂಪ್ ನ ಪ್ರಮುಖ ಸಂಸ್ಥೆ ಅದಾನಿ ಎಂಟರ್‌ಪ್ರೈಸಸ್‌ನ ಮಾಧ್ಯಮ ವಿಭಾಗವಾದ AMG ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್, IANS ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಉಳಿದ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಷೇರು ಖರೀದಿ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಅದಾನಿ ಗ್ರೂಪ್ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ. ಆದಾಗ್ಯೂ, ವಹಿವಾಟಿನ ಹಣಕಾಸಿನ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ.
ಡಿಸೆಂಬರ್ 2023 ರಲ್ಲಿ ಅದಾನಿ ಗ್ರೂಪ್, IANS(ಇಂಡೋ-ಏಷ್ಯನ್ ನ್ಯೂಸ್ ಸರ್ವಿಸ್) ನಲ್ಲಿ ಶೇ. 50 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿತ್ತು. ಇದರಿಂದಾಗಿ ನ್ಯೂಸ್‌ವೈರ್ ಏಜೆನ್ಸಿಯನ್ನು ಅದಾನಿ ಮಾಧ್ಯಮ ವಿಭಾಗದ ಅಂಗಸಂಸ್ಥೆಯನ್ನಾಗಿ ಮಾಡಿತು. ಜನವರಿ 2024 ರಲ್ಲಿ, AMG ಮೀಡಿಯಾ ನೆಟ್‌ವರ್ಕ್ಸ್ (AMNL) ಮತದಾನದ ಹಕ್ಕುಗಳನ್ನು ಹೊಂದಿರುವ IANS ಷೇರುಗಳ ಮಾಲೀಕತ್ವವನ್ನು ಶೇಕಡಾ 76ಕ್ಕೆ ಹೆಚ್ಚಿಸಿಕೊಂಡಿತ್ತು.
"ಐಎಎನ್‌ಎಸ್‌ನಲ್ಲಿ ಬಾಕಿ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಎಎಮ್‌ಎನ್‌ಎಲ್ ಈಗ ಜನವರಿ 21, 2026 ರಂದು ಷೇರು ಖರೀದಿ ಒಪ್ಪಂದವನ್ನು ಕಾರ್ಯಗತಗೊಳಿಸಿದೆ. ಪ್ರಸ್ತಾವಿತ ವಹಿವಾಟು ಪೂರ್ಣಗೊಂಡ ನಂತರ, ಐಎಎನ್‌ಎಸ್ ಕಂಪನಿಯ ಸಂಪೂರ್ಣ ಸ್ವಾಮ್ಯದ ಸ್ಟೆಪ್-ಡೌನ್ ಅಂಗಸಂಸ್ಥೆಯಾಗಲಿದೆ" ಎಂದು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಫೈಲಿಂಗ್‌ನಲ್ಲಿ ತಿಳಿಸಿದೆ.
ಇದಕ್ಕೂ ಮೊದಲು, ಎಎಮ್‌ಎನ್‌ಎಲ್, ಐಎಎನ್‌ಎಸ್‌ನ ವರ್ಗ-1 ಷೇರುಗಳಲ್ಲಿ ಶೇ. 76 ಮತ್ತು ವರ್ಗ-II ಷೇರುಗಳಲ್ಲಿ ಶೇ. 99.26 ರಷ್ಟು ಹೊಂದಿತ್ತು.