ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ 
ವಾಣಿಜ್ಯ

Indian Stock Market: ದೀಪಾವಳಿ ಧಮಾಕಾ, ಸೆನ್ಸೆಕ್ಸ್ 2,009 ಅಂಕ ಜಿಗಿತ, 24,500ರ ಗಡಿ ದಾಟಿದ ನಿಫ್ಟಿ!

ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದ್ದು, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿ ಹೊಸ ಉತ್ಸಾಹ..

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ ಭರ್ಜರಿ ಏರಿಕೆ ಕಂಡುಬಂದಿದ್ದು, 2 ದಿನ ಮೊದಲೇ ಹೂಡಿಕೆದಾರರಿಗೆ ಭರ್ಜರಿ ಗಿಫ್ಟ್ ದೊರೆತಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದ್ದು, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಪರಿಣಾಮ ಭಾರತೀಯ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಅಂಶಗಳ ಏರಿಕೆ ಕಂಡಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.2.60ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.2.40ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 2,008.61ಅಂಕಗಳ ಏರಿಕೆಯೊಂದಿಗೆ 79,310.01 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 576 ಅಂಕಗಳ ಏರಿಕೆಯೊಂದಿಗೆ 24,536.60 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಬಜಾಜ್ ಫೈನಾನ್ಸ್ ಷೇರುಗಳಿಗೆ ಭರ್ಜರಿ ಲಾಭ

ಗುರುವಾರದ ವಹಿವಾಟಿನಲ್ಲಿ ಬಜಾಜ್ ಫೈನಾನ್ಸ್ ಷೇರುಗಳು ಅತಿ ಹೆಚ್ಚು ಲಾಭ ಗಳಿಸಿವೆ. ಈ ಷೇರು ಶೇ.7.77ರಷ್ಟು ಏರಿಕೆಯಾಗಿದೆ.

ಇಂಟರ್‌ಗ್ಲೋಬ್ ಏವಿಯೇಷನ್ ಶೇ.5.80, ಐಸಿಐಸಿಐ ಬ್ಯಾಂಕ್ ಶೇ.5.29, ಮಾರುತಿ ಶೇ.5.28, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ.5.15 ಹಾಗೂ ಬಜಾಜ್ ಫಿನ್‌ಸರ್ವ್ ಶೇ.4.66ರಷ್ಟು ಏರಿಕೆ ಕಂಡಿವೆ.

ಆದರೆ ಎನ್‌ಟಿಪಿಸಿ, ಭಾರತ್ ಎಲೆಕ್ಟ್ರಾನಿಕ್ಸ್, ಅದಾನಿ ಪೋರ್ಟ್ಸ್ ಮತ್ತು ಐಟಿಸಿ ಸೇರಿದಂತೆ ಕೆಲವು ಕಂಪನಿಗಳ ಷೇರುಗಳು ನಷ್ಟ ಅನುಭವಿಸಿವೆ.

ಸತತ 6 ದಿನಗಳಿಂದ ಷೇರುಪೇಟೆಯಲ್ಲಿ ಏರಿಕೆ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ಆರು ವಹಿವಾಟು ದಿನಗಳಿಂದ ಸತತವಾಗಿ ಏರಿಕೆ ಕಂಡುಬರುತ್ತಿದೆ. ಈ ಆರು ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟು 6,063.98 ಅಂಕಗಳಷ್ಟು (ಶೇ.8.27) ಏರಿಕೆಯಾಗಿದೆ. ಇದೇ ಅವಧಿಯಲ್ಲಿ ನಿಫ್ಟಿ 1,837.75 ಅಂಕಗಳಷ್ಟು (ಶೇ.8) ಜಿಗಿದಿದೆ.

ಷೇರುಪೇಟೆ ಏರಿಕೆಗೆ ಕಾರಣವೇನು?

ಅಮೆರಿಕದ ಷೇರು ಮಾರುಕಟ್ಟೆಯಲ್ಲಿನ ಉತ್ತಮ ವಹಿವಾಟು, ವಿದೇಶಿ ಹೂಡಿಕೆದಾರರಿಂದ ನಿರಂತರವಾಗಿ ಹರಿದುಬರುತ್ತಿರುವ ಹಣ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷ ಶಮನವಾಗುವ ನಿರೀಕ್ಷೆ ಭಾರತೀಯ ಷೇರುಪೇಟೆಗೆ ಬಲ ನೀಡಿವೆ.

ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷ ಕಾಂಗ್ರೆಸ್ ಮೇಲಿನ ನಿಯಂತ್ರಣ ಪಡೆದಿರುವ ಬೆಳವಣಿಗೆಯೂ ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಆಶಾವಾದಕ್ಕೆ ಕಾರಣವಾಗಿದೆ.

ಇದೇ ವೇಳೆ ಜಾಗತಿಕ ಕಚ್ಚಾ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ.1.59ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 96.12 ಡಾಲರ್‌ಗೆ ತಲುಪಿತ್ತು.

ಒಟ್ಟಿನಲ್ಲಿ, ಜಾಗತಿಕ ಬೆಳವಣಿಗೆಗಳ ಬೆಂಬಲದಿಂದ ಭಾರತೀಯ ಷೇರು ಮಾರುಕಟ್ಟೆ ಸತತ ಆರು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದು, ಹೂಡಿಕೆದಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ, ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಲಾಭ!

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌: ತುಟ್ಟಿಭತ್ಯೆ ಶೇ. 18ಕ್ಕೆ ಹೆಚ್ಚಿಸಿ ಆದೇಶ

ಜಾಗತಿಕ ಫುಟ್ಬಾಲ್ ಪ್ರೇಮಿಗಳಿಗೆ ಆಘಾತ; 23 ವರ್ಷಗಳ ಪಯಣಕ್ಕೆ Cristiano Ronaldo ವಿದಾಯ; ಕಣ್ಣೀರ Video ಬಿಡುಗಡೆ!

'ದಗಾಕೋರ ಸರ್ಕಾರ, ಚಿತ್ತಾಪುರನ ಏನ್ ಚಿಕಾಗೋ ಮಾಡಿದ್ದೀರಾ? PUC ಫೇಲ್ ಆದ ನೀವು ರಾಜ್ಯದ ಗೃಹಮಂತ್ರಿ': ಪ್ರತಾಪ್ ಸಿಂಹ ವಾಗ್ದಾಳಿ

ತಮಿಳುನಾಡಿನ ದೇವಾಲಯವೊಂದಕ್ಕೆ 5 ಕೋಟಿ ರೂ.ಗೂ ಹೆಚ್ಚು ನಗದು, 160 ಗ್ರಾಂ ಚಿನ್ನ, 1,540 ಗ್ರಾಂ ಬೆಳ್ಳಿ ಕಾಣಿಕೆ!