ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ, ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಲಾಭ!

ಗುರುವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 1,300ಕ್ಕೂ ಹೆಚ್ಚು ಅಂಕಗಳ ಏರಿಕೆಯೊಂದಿಗೆ 78,630ರ ಮಟ್ಟ ತಲುಪಿತ್ತು. ನಿಫ್ಟಿ ಕೂಡ 24,350ರ ಗಡಿ ದಾಟಿತ್ತು. ಮಧ್ಯಾಹ್ನ 1.45ರ ವೇಳೆಗೆ ಸೆನ್ಸೆಕ್ಸ್..
Investors Earn Rs 8 Lakh Crore As Sensex Gains 2,000 Points
ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ
Updated on: 

ಮುಂಬೈ: ಅಮೆರಿಕದ ಮಧ್ಯಂತರ ಚುನಾವಣೆ ಫಲಿತಾಂಶದ ಪರಿಣಾಮ ಭಾರತೀಯ ಷೇರುಪೇಟೆಯಲ್ಲಿ ಗುರುವಾರ ಭರ್ಜರಿ ಪರಿಣಾಮ ಬೀರಿದ್ದು, ಷೇರುಪೇಟೆಯ ಉಭಯ ಸೂಚ್ಯಂಕಗಳು ಭರ್ಜರಿ ಏರಿಕೆ ಕಂಡಿವೆ.

ಭಾರತೀಯ ಷೇರುಪೇಟೆ ಸತತ ಆರನೇ ವಹಿವಾಟಿನ ದಿನವೂ ಏರಿಕೆ ದಾಖಲಿಸಿದೆ. ಗುರುವಾರ ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ ಬರೋಬ್ಬರಿ 2,000ಕ್ಕೂ ಹೆಚ್ಚು ಅಂಕ ಏರಿಕೆ ಕಂಡರೆ, ನಿಫ್ಟಿ ಕೂಡ ಭಾರಿ ಜಿಗಿತ ದಾಖಲಿಸಿದೆ.

ಇದರಿಂದ ಹೂಡಿಕೆದಾರರ ಸಂಪತ್ತಿಗೆ ಒಂದೇ ದಿನದಲ್ಲಿ ಸುಮಾರು 8 ಲಕ್ಷ ಕೋಟಿ ರೂಪಾಯಿ ಸೇರ್ಪಡೆಯಾಗಿದೆ. ಕಚ್ಚಾ ತೈಲ ಬೆಲೆ ಭಾರಿ ಕುಸಿತ, ವಿದೇಶಿ ಹೂಡಿಕೆದಾರರ ಖರೀದಿ ಮತ್ತು ಅಮೆರಿಕದ ಷೇರುಪೇಟೆಯಲ್ಲಿನ ಚೇತರಿಕೆ ಭಾರತೀಯ ಮಾರುಕಟ್ಟೆಗೆ ಬಲ ನೀಡಿವೆ.

ಇನ್ನು ಗುರುವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 1,300ಕ್ಕೂ ಹೆಚ್ಚು ಅಂಕಗಳ ಏರಿಕೆಯೊಂದಿಗೆ 78,630ರ ಮಟ್ಟ ತಲುಪಿತ್ತು. ನಿಫ್ಟಿ ಕೂಡ 24,350ರ ಗಡಿ ದಾಟಿತ್ತು. ಮಧ್ಯಾಹ್ನ 1.45ರ ವೇಳೆಗೆ ಸೆನ್ಸೆಕ್ಸ್ 2,000ಕ್ಕೂ ಹೆಚ್ಚು ಅಂಕ ಏರಿಕೆಯಾಗಿ 79,330ಕ್ಕೆ ತಲುಪಿದರೆ, ನಿಫ್ಟಿ 581 ಅಂಕಗಳ ಜಿಗಿತದೊಂದಿಗೆ 24,548.55ರ ಮಟ್ಟ ತಲುಪಿತ್ತು.

ಇದರೊಂದಿಗೆ ನಿಫ್ಟಿ ಸೆಪ್ಟೆಂಬರ್ 4, 2026ರ ಬಳಿಕ ಇದೇ ಮೊದಲ ಬಾರಿಗೆ 24,000 ಅಂಕಗಳ ಗಡಿ ದಾಟಿದೆ.

Investors Earn Rs 8 Lakh Crore As Sensex Gains 2,000 Points
ಸ್ಟಾಕಾಲ್ ಎಡವಟ್ಟು: ಒಪ್ಪಿಗೆಯಿಲ್ಲದೆ ಅಮೆರಿಕನ್ ಷೇರುಗಳ ಮಾರಾಟ, ಭಾರತೀಯ ಹೂಡಿಕೆದಾರರಿಗೆ 100 ಕೋಟಿ ನಷ್ಟ!

ಹೂಡಿಕೆದಾರರ ಸಂಪತ್ತಿಗೆ 8 ಲಕ್ಷ ಕೋಟಿ ರೂ. ಸೇರ್ಪಡೆ!

ಗುರುವಾರ ವಹಿವಾಟು ಆರಂಭವಾದಾಗ ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 4,93,44,359 ಕೋಟಿ ರೂಪಾಯಿಗಳಷ್ಟಿತ್ತು. ಮಧ್ಯಾಹ್ನ 1.45ರ ವೇಳೆಗೆ ಇದು 5,02,36,269 ಕೋಟಿ ರೂಪಾಯಿಗಳಿಗೆ ಏರಿಕೆಯಾಯಿತು. ಅಂದರೆ ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರ ಸಂಪತ್ತು ಸುಮಾರು 8.92 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ.

ಅಮೆರಿಕದ ಷೇರುಪೇಟೆಯಲ್ಲಿನ ಭರ್ಜರಿ ಏರಿಕೆಯೂ ಭಾರತೀಯ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಎರಡೂ ಸದನಗಳಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದೆ.

ಷೇರುಪೇಟೆ ಏರಿಕೆ ಕಾರಣಗಳು

ಭಾರತೀಯ ಷೇರುಪೇಟೆಯ ಏರಿಕೆಗೆ ಪ್ರಮುಖ ಕಾರಣ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದು. ಹಿಂದಿನ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಶೇ.8.7ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 94 ಡಾಲರ್ ಸಮೀಪಕ್ಕೆ ತಲುಪಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ (WTI) ಕಚ್ಚಾ ತೈಲ ಬೆಲೆ ಕೂಡ 88 ಡಾಲರ್ ಆಸುಪಾಸಿಗೆ ಇಳಿದಿದೆ.

ಅಂತೆಯೇ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಗೆಲುವಿನ ಬಳಿಕ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ತಗ್ಗಿಸಲು ಟ್ರಂಪ್ ಆಡಳಿತದ ಮೇಲೆ ಒತ್ತಡ ಹೆಚ್ಚಾಗಬಹುದು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿದೆ. ಇದರಿಂದ ತೈಲ ಪೂರೈಕೆಯಲ್ಲಿನ ಆತಂಕ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರವೂ ಇದೆ.

ಭಾರತವು ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ತೈಲ ಬೆಲೆ ಹೆಚ್ಚಾದರೆ ದೇಶದ ಆಮದು ವೆಚ್ಚ, ಹಣದುಬ್ಬರ ಮತ್ತು ರೂಪಾಯಿ ಮೌಲ್ಯದ ಮೇಲೆ ಒತ್ತಡ ಉಂಟಾಗುತ್ತದೆ. ಹೀಗಾಗಿ ಕಚ್ಚಾ ತೈಲ ಬೆಲೆ ಇಳಿಕೆಯು ಭಾರತದ ಆರ್ಥಿಕತೆಗೆ ಮತ್ತು ಕಂಪನಿಗಳ ಲಾಭದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು.

Investors Earn Rs 8 Lakh Crore As Sensex Gains 2,000 Points
ಕೆಲಸದಿಂದ ತೆಗೆದ್ರೂ ಜಾಕ್‌ಪಾಟ್: ಮ್ಯಾಕ್‌ಬುಕ್ ಜೊತೆಗೆ ಬಿಸಿನೆಸ್ ಫಂಡ್; 1271 ನೌಕರರನ್ನ ವಜಾ ಮಾಡಿ ಬಂಪರ್ ಪ್ಯಾಕೇಜ್ ಕೊಟ್ಟ ಕ್ಯಾನ್ವಾ!

ವಿದೇಶಿ ಹೂಡಿಕೆದಾರರಿಂದ ಭರ್ಜರಿ ಖರೀದಿ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಮತ್ತೆ ಭಾರತೀಯ ಷೇರುಪೇಟೆಯಲ್ಲಿ ಖರೀದಿಗೆ ಮುಂದಾಗಿದ್ದಾರೆ. ಬುಧವಾರ ಒಂದೇ ದಿನದಲ್ಲಿ ಅವರು 7,284 ಕೋಟಿ ರೂಪಾಯಿ ಮೌಲ್ಯದ ಭಾರತೀಯ ಷೇರುಗಳನ್ನು ಖರೀದಿಸಿದ್ದಾರೆ.

ಇದು ಅಕ್ಟೋಬರ್ 28, 2025ರ ಬಳಿಕ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಖರೀದಿಯಾಗಿದೆ. ವಿಶೇಷವೆಂದರೆ, ಸತತ ನಾಲ್ಕನೇ ವಹಿವಾಟಿನ ದಿನವೂ ವಿದೇಶಿ ಹೂಡಿಕೆದಾರರು ನಿವ್ವಳ ಖರೀದಿದಾರರಾಗಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಇದುವರೆಗೆ 17,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುಮಾರು 90,000 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದ ವಿದೇಶಿ ಹೂಡಿಕೆದಾರರು ಮತ್ತೆ ಖರೀದಿಗೆ ಮರಳಿರುವುದು ಮಾರುಕಟ್ಟೆಯ ಉತ್ಸಾಹ ಹೆಚ್ಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X