ಗಾಂಧಿನಗರ (ಗುಜರಾತ್): ನಂದಿನಿ ಮತ್ತು ಮದರ್ ಡೈರಿ ಸಂಸ್ಥೆಗಳ ಬೆನ್ನಲ್ಲೇ ದೇಶದ ಪ್ರಮುಖ ಡೈರಿ ಬ್ರ್ಯಾಂಡ್ ಅಮುಲ್ ಕೂಡ ಹಾಲಿನ ದರವನ್ನು ಹೆಚ್ಚಿಸಿದೆ. ನಂದಿನಿ ಹಾಲಿನ ದರ ನವೆಂಬರ್ 1 ರಿಂದಲೇ ಲೀಟರ್‌ಗೆ ₹8 ಹೆಚ್ಚಾಗಿತ್ತು. ಮದರ್ ಡೈರಿ ಕೂಡ ನವೆಂಬರ್ 12 ರಿಂದ ₹2 ರಿಂದ ₹4 ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಈಗ ಅದೇ ಹಾದಿಯಲ್ಲಿ ದೇಶದ ಅತಿದೊಡ್ಡ ಡೈರಿ ಬ್ರ್ಯಾಂಡ್ ಅಮುಲ್ ಕೂಡ ದೇಶಾದ್ಯಂತ ಹಾಲಿನ ದರವನ್ನು ಲೀಟರ್‌ಗೆ ₹2 ರಿಂದ ₹6 ರವರೆಗೆ ಹೆಚ್ಚಿಸಿದೆ. ನಾಳೆ ಅಂದರೆ ನವೆಂಬರ್ 12 ರಿಂದಲೇ ಹೊಸ ದರ ಜಾರಿಗೆ ಬರಲಿದೆ. ಆ ಕುರಿತ ವರದಿ ಇಲ್ಲಿದೆ:
ಯಾವ ಹಾಲಿಗೆ ಎಷ್ಟು ಏರಿಕೆ?
ಅಮುಲ್ ತಾಜಾ (ಟೋನ್ಡ್ ಹಾಲು): ಇದರ ಬೆಲೆಯನ್ನು ₹2 ಹೆಚ್ಚಿಸಲಾಗಿದೆ.
ಅಮುಲ್ ಗೋಲ್ಡ್ (ಪೂರ್ಣ ಕೆನೆ ಹಾಲು): ಇದರ ಬೆಲೆಯಲ್ಲಿ ₹4 ರಷ್ಟು ಏರಿಕೆಯಾಗಿದೆ.
ಪೂರ್ಣ ಕೆನೆಭರಿತ ಎಮ್ಮೆ ಹಾಲು: ಎಮ್ಮೆಯ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹6 ರಷ್ಟು ಗರಿಷ್ಠ ಹೆಚ್ಚಳ ಮಾಡಲಾಗಿದ್ದು, ಹಳೆಯ ದರ ₹80 ರಿಂದ ಈಗ ₹86 ಕ್ಕೆ ಏರಿಕೆಯಾಗಿದೆ.
ಏರಿಕೆಗೆ ಕಾರಣವೇನು?
ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಪ್ರಕಾರ ಕಳೆದ ಒಂದು ವರ್ಷದಲ್ಲಿ ಹಸಿರು ಮೇವು, ಒಣ ಮೇವು, ಪಶು ಆಹಾರದ ಕಚ್ಚಾ ವಸ್ತುಗಳಾದ ಎಣ್ಣೆ ಹಿಂಡಿ, ಜೋಳ, ಮೊಲಾಸಸ್, ಹಾಲಿನ ಪ್ಯಾಕೇಜಿಂಗ್ ಫಿಲ್ಮ್ ಮತ್ತು ಇಂಧನದ ಬೆಲೆ ತೀವ್ರವಾಗಿ ಏರಿದೆ. ಇದರ ಜೊತೆಗೆ ಹಾಲಿನ ಲಭ್ಯತೆ ಕಡಿಮೆಯಾಗಿದ್ದು, ಕಳೆದ ಕೆಲವು ತಿಂಗಳಲ್ಲಿ ಹಾಲಿನ ಕೊಬ್ಬಿನ ಬೆಲೆ 20 ರಿಂದ 25% ಏರಿದೆ. ರೈತರಿಗೆ ಫ್ಯಾಟ್ ಆಧಾರದಲ್ಲಿ ಅಮುಲ್ ಈಗ ಕೆಜಿಗೆ ₹1,000 ಕೊಡುತ್ತಿದ್ದು, ರೈತರಿಗೆ ಲೀಟರ್‌ಗೆ ₹60 ಕ್ಕಿಂತ ಹೆಚ್ಚು ಸಿಗುತ್ತಿದೆ. ಸಾಮಾನ್ಯವಾಗಿ ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಫ್ಲಶ್ ಸೀಸನ್ ನಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿ ಬೆಲೆ ಸ್ಥಿರವಾಗಿರುತ್ತದೆ. ಆದರೆ ಈ ಬಾರಿ ಫ್ಲಶ್ ಸೀಸನ್ ನಲ್ಲೂ ಬೆಲೆ ಏರುತ್ತಿರುವುದು ಗಮನಾರ್ಹ.
ಏತನ್ಮಧ್ಯೆ, ಹಾಲಿನ ದರ ಏರಿಕೆಯಾಗುವ ಕೆಲವೇ ದಿನಗಳ ಮುನ್ನ (ನವೆಂಬರ್ 2ರಂದು), ಅಮುಲ್ ಸಂಸ್ಥೆಯು ತನ್ನ ಇತರ ಜನಪ್ರಿಯ ಡೈರಿ ಉತ್ಪನ್ನಗಳ ಬೆಲೆಯನ್ನು ಕೂಡ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ನೀಡಿತ್ತು.
ಅಮುಲ್ ತುಪ್ಪ: ಪ್ರತಿ ಲೀಟರ್‌ಗೆ ಬರೋಬ್ಬರಿ ₹50 ಹೆಚ್ಚಳ ಮಾಡಲಾಗಿದೆ (1 ಕೆಜಿ ಕಾರ್ಟನ್ ಬೆಲೆ ₹630 ರಿಂದ ₹680 ಕ್ಕೆ ಏರಿದೆ).
ಅಮುಲ್ ಬೆಣ್ಣೆ: 500 ಗ್ರಾಂ ಪ್ಯಾಕ್ ಮೇಲೆ ₹15 ಹೆಚ್ಚಳ ಮಾಡಲಾಗಿದೆ.