ಮುಂಬೈ (ಮಹಾರಾಷ್ಟ್ರ): ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿ, ಕೆನಡಾದ ಫೇರ್ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಸಂಸ್ಥೆಯು ಐಡಿಬಿಐ ಬ್ಯಾಂಕ್ನ ಕಾರ್ಯತಂತ್ರದ ಖರೀದಿದಾರನಾಗಿ ಆಯ್ಕೆಯಾಗಿದೆ. ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಈ ಮೆಗಾ ಡೀಲ್ಗೆ ಅಧಿಕೃತ ಅನುಮೋದನೆ ನೀಡಿದ್ದು, ಈ ಮೂಲಕ ಐಡಿಬಿಐ ಬ್ಯಾಂಕ್ನ ಒಟ್ಟು ಶೇ. 60.72 ರಷ್ಟು ಷೇರುಗಳನ್ನು ₹52,878.08 ಕೋಟಿ ಭಾರಿ ಮೊತ್ತಕ್ಕೆ ಖರೀದಿ ಮಾಡಲಿದೆ. ಆ ಕುರಿತ ವರದಿ ಇಲ್ಲಿದೆ:
₹52,878 ಕೋಟಿಗೆ IDBI ಡೀಲ್!
ಕೆನಡಾದ ಈ ಕಂಪನಿಯು ಐಡಿಬಿಐ ಬ್ಯಾಂಕ್ನ ಒಟ್ಟು ಶೇ. 60.72 ರಷ್ಟು ಷೇರುಗಳನ್ನು ₹52,878.08 ಕೋಟಿ ಭಾರಿ ಮೊತ್ತಕ್ಕೆ ಖರೀದಿ ಮಾಡಲಿದೆ. ಅದರಂತೆ, ಈ ಒಪ್ಪಂದದ ಅಡಿಯಲ್ಲಿ ಕೇಂದ್ರ ಸರ್ಕಾರವು ತನ್ನ ಶೇ. 30.48 ರಷ್ಟು ಮತ್ತು ಎಲ್ಐಸಿ ಸಂಸ್ಥೆಯು ತನ್ನ ಶೇ. 30.24 ರಷ್ಟು ಪಾಲನ್ನು ಮಾರಾಟ ಮಾಡಲಿವೆ. ಅದರಲ್ಲೂ, ಪ್ರತಿ ಷೇರಿಗೆ ₹81 ರಂತೆ ಫೇರ್ಫ್ಯಾಕ್ಸ್ ಬಿಡ್ ಗೆದ್ದುಕೊಂಡಿದೆ. ಇದು ಸ್ವತಂತ್ರ ಸಂಸ್ಥೆಗಳು ನಿಗದಿಪಡಿಸಿದ್ದ ₹75.99 ರ ಮೂಲ ಮೌಲ್ಯಕ್ಕಿಂತ ಹೆಚ್ಚಾಗಿದೆ.
ಹಾಗಾದ್ರೆ, ಉಳಿದ ಷೇರುಗಳು ಯಾರ ಬಳಿ ಇರಲಿವೆ?
ಈ ಮಾರಾಟದ ನಂತರವೂ ಕೇಂದ್ರ ಸರ್ಕಾರ ಶೇ. 15 ರಷ್ಟು ಮತ್ತು ಎಲ್ಐಸಿ ಶೇ. 19 ರಷ್ಟು ಷೇರುಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲಿವೆ. ಏತನ್ಮಧ್ಯೆ, ಬ್ಯಾಂಕ್ನ ಸದ್ಯದ ಹೆಸರನ್ನು ಐಡಿಬಿಐ ಬ್ಯಾಂಕ್ ಮುಂದಿನ 3 ವರ್ಷಗಳ ಕಾಲ ಬದಲಾಯಿಸುವಂತಿಲ್ಲ. ಇದರೊಂದಿಗೆ, ಫೇರ್ಫ್ಯಾಕ್ಸ್ ಈಗಾಗಲೇ ಭಾರತದ ಸಿಎಸ್ಬಿ ಬ್ಯಾಂಕ್ನಲ್ಲಿ ಹೂಡಿಕೆ ಹೊಂದಿರುವುದರಿಂದ, ಆರ್ಬಿಐ ನಿಯಮಗಳ ಪ್ರಕಾರ ಮುಂದಿನ 2 ವರ್ಷಗಳ ಒಳಗಾಗಿ CSB ಬ್ಯಾಂಕ್ ಅನ್ನು ಐಡಿಬಿಐ ಬ್ಯಾಂಕ್ ಜೊತೆ ವಿಲೀನಗೊಳಿಸಬೇಕು ಅಥವಾ ಅದರಲ್ಲಿನ ತನ್ನ ಪಾಲನ್ನು ಮಾರಾಟ ಮಾಡಬೇಕು.
ಈ ಮಾರಾಟ ಯಾಕೆ?
ಕಾರ್ಯತಂತ್ರದ ಪುನಾರಚನೆ ಮತ್ತು ಖಾಸಗೀಕರಣ: ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ತನ್ನ ಬಂಡವಾಳವನ್ನು ಹಿಂತೆಗೆದುಕೊಳ್ಳುವ ನೀತಿಯ ಭಾಗವಾಗಿ ಈ ಕ್ರಮ ಕೈಗೊಂಡಿದೆ. ಬ್ಯಾಂಕ್ನ ದೈನಂದಿನ ನಿರ್ವಹಣಾ ಜವಾಬ್ದಾರಿಯನ್ನು ಸಮರ್ಥ ಖಾಸಗಿ ಸಂಸ್ಥೆಗೆ ಒಪ್ಪಿಸಿ, ಅದನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುವುದು ಇದರ ಉದ್ದೇಶವಾಗಿದೆ.
ಹಣಕಾಸಿನ ಹೊರೆ ಕಡಿಮೆ ಮಾಡುವುದು: ಈ ಹಿಂದೆ ಐಡಿಬಿಐ ಬ್ಯಾಂಕ್ ಭಾರೀ ಪ್ರಮಾಣದ ವಸೂಲಾಗದ ಸಾಲದ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಬ್ಯಾಂಕ್ ಅನ್ನು ಮುನ್ನಡೆಸಲು ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (LIC) ನಿರಂತರವಾಗಿ ಕೋಟ್ಯಂತರ ರೂಪಾಯಿಗಳ ಬಂಡವಾಳವನ್ನು ತೊಡಗಿಸಬೇಕಾಗಿತ್ತು. ಈ ಹಣಕಾಸಿನ ಹೊರೆಯನ್ನು ತಗ್ಗಿಸಲು ಮತ್ತು ಬ್ಯಾಂಕ್ಗೆ ವಿದೇಶಿ ಬಂಡವಾಳದ ಬಲ ತುಂಬಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಉತ್ತಮ ಮೌಲ್ಯದ ಬಿಡ್: ಫೇರ್ಫ್ಯಾಕ್ಸ್ ಸಂಸ್ಥೆಯು ಪ್ರತಿ ಷೇರಿಗೆ ₹81 ರಂತೆ ಬಿಡ್ ಸಲ್ಲಿಸಿತ್ತು. ಇದು ಸ್ವತಂತ್ರ ಮೌಲ್ಯಮಾಪನ ಸಂಸ್ಥೆಗಳು ನಿಗದಿಪಡಿಸಿದ್ದ ಕನಿಷ್ಠ ಮೌಲ್ಯಕ್ಕಿಂತ (₹75.99) ಹೆಚ್ಚಿನದಾಗಿದ್ದರಿಂದ ಸರ್ಕಾರ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ.
ಬ್ಯಾಂಕ್ನ ಆರ್ಥಿಕ ಚೇತರಿಕೆ: ಕಳೆದ ಕೆಲವು ವರ್ಷಗಳಲ್ಲಿ IDBI ಬ್ಯಾಂಕ್ನ ಆರ್ಥಿಕ ಸ್ಥಿತಿ ಗಣನೀಯವಾಗಿ ಸುಧಾರಿಸಿದೆ. 2018 ರಲ್ಲಿ ಶೇ. 31.8 ರಷ್ಟಿದ್ದ ಬ್ಯಾಂಕ್ನ ಒಟ್ಟು ವಸೂಲಾಗದ ಸಾಲದ ಪ್ರಮಾಣವು 2026 ರ ವೇಳೆಗೆ ಶೇ. 2.3 ಕ್ಕೆ ಇಳಿಕೆಯಾಗಿದೆ. ಬ್ಯಾಂಕ್ ಲಾಭದ ಹಳಿಗೆ ಮರಳಿರುವುದರಿಂದ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು ಸುಲಭವಾಯಿತು.
ನೌಕರರಿಗೆ ಯಾವುದೇ ಆತಂಕವಿಲ್ಲ!
ಈ ಕಾರ್ಯತಂತ್ರದ ಮಾಲೀಕತ್ವ ವರ್ಗಾವಣೆಯಿಂದ ಐಡಿಬಿಐ ಬ್ಯಾಂಕ್ ನೌಕರರ ಉದ್ಯೋಗಕ್ಕೆ ಯಾವುದೇ ಧಕ್ಕೆ ಇರುವುದಿಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲದೆ ಮಾಜಿ ಉದ್ಯೋಗಿಗಳ ಪೆನ್ಷನ್ ಒದಗಿಸಲೆಂದೇ ಪ್ರತ್ಯೇಕ ನಿಧಿಯನ್ನು ಕಾಯ್ದಿರಿಸಲಾಗಿದೆ.