ಮುಂಬೈ: ಭಾರಿ ಕುಸಿತ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆ ಕೊನೆಗೂ ಪುಟಿದೆದ್ದಿದ್ದು, ಗುರುವಾರ ಸೆನ್ಸೆಕ್ಸ್ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿದೆ.
ಗುರುವಾರ ಷೇರುಮಾರುಕಟ್ಟೆ ಸೂಚ್ಯಂಕಗಳು ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.2.11ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.66ರಷ್ಟು ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಬರೊಬ್ಬರಿ 1,533 ಅಂಕಗಳ ಏರಿಕೆಯೊಂದಿಗೆ 74,315.61 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 374.65 ಅಂಕಗಳ ಏರಿಕೆಯೊಂದಿಗೆ 22,997.35 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್, ಐಟಿ ಮತ್ತು ಇಂಡಸ್ಟ್ರೀಸ್ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.
ಯಾರಿಗೆ ಲಾಭ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟೆಕ್ ಮಹೀಂದ್ರ ಶೇ. 4.61, ಐಸಿಐಸಿಐ ಬ್ಯಾಂಕ್ ಶೇ. 4.17, ರಿಲಯನ್ಸ್ ಇಂಡಸ್ಟ್ರೀಸ್ ಶೇ. 4.03, ಭಾರ್ತಿ ಏರ್ಟೆಲ್ ಶೇ. 2.94, ಎಟರ್ನಲ್ ಶೇ. 2.77, ಎಚ್ಸಿಎಲ್ ಟೆಕ್ ಶೇ. 2.58, ಎಚ್ಡಿಎಫ್ಸಿ ಬ್ಯಾಂಕ್ ಶೇ. 2.51 ಮತ್ತು ಟಿಸಿಎಸ್ ಶೇ. 2.28ರಷ್ಟು ಏರಿ ಲಾಭಾಂಶ ಕಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ ಡಿಜಿಟಲ್ ಮತ್ತು ಟೆಲಿಕಾಂ ಅಂಗಸಂಸ್ಥೆಯಾದ ಜಿಯೋ ಪ್ಲಾಟ್ಫಾರ್ಮ್ಸ್ ತನ್ನ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ (ಐಪಿಒ)ಗೆ ಪ್ರತಿ ಷೇರಿಗೆ ₹1,065ರಿಂದ ₹1,119ರವರೆಗೆ ಬೆಲೆ ನಿಗದಿಪಡಿಸಿರುವುದು ರಿಲಯನ್ಸ್ ಷೇರುಗಳ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಗರಿಷ್ಠ ಬೆಲೆಯಲ್ಲಿ ಷೇರು ವಿತರಿಸಿದರೆ, ಈ ಐಪಿಒ ಮೂಲಕ ಸುಮಾರು ₹30,213 ಕೋಟಿ ಸಂಗ್ರಹವಾಗುವ ನಿರೀಕ್ಷೆಯಿದ್ದು, ಇದು ಭಾರತದ ಅತಿದೊಡ್ಡ ಐಪಿಒ ಆಗುವ ಸಾಧ್ಯತೆಯಿದೆ.
ಇದೇ ವೇಳೆ, ಕೃತಕ ಬುದ್ಧಿಮತ್ತೆ (ಎಐ) ಕಂಪನಿಗಳ ಹೆಚ್ಚಿನ ಮೌಲ್ಯಮಾಪನ ಮತ್ತು ಅಮೆರಿಕದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಆತಂಕದಿಂದ ಏಷ್ಯಾದ ಪ್ರಮುಖ ಷೇರು ಮಾರುಕಟ್ಟೆಗಳಲ್ಲಿ ಮಾರಾಟದ ಒತ್ತಡ ಕಂಡುಬಂದಿದೆ. ಆದರೂ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿ ಚಟುವಟಿಕೆ ಹೆಚ್ಚಾದ ಪರಿಣಾಮ ಸೂಚ್ಯಂಕಗಳು ಭರ್ಜರಿ ಏರಿಕೆ ದಾಖಲಿಸಿವೆ.