ಮುಂಬೈ (ಮಹರಾಷ್ಟ್ರ): ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಟೆಲಿಕಾಂ ಮತ್ತು ಡಿಜಿಟಲ್ ವಿಭಾಗವಾದ ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಐಪಿಒ ಬಿಡುಗಡೆಗೆ ಅಧಿಕೃತವಾಗಿ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಸಲ್ಲಿಕೆ ಮಾಡಿದೆ. ಇದು ಒಟ್ಟು ₹30,213 ಕೋಟಿ ಮೌಲ್ಯದ ಸಾರ್ವಜನಿಕ ಕೊಡುಗೆಯಾಗಿದ್ದು, ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಎಂಬ ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದೆ. ಆ ಕುರಿತ ವರದಿ ಇಲ್ಲಿದೆ:
ಶೇರು ಬೆಲೆ ಹಾಗೂ ಕನಿಷ್ಠ ಹೂಡಿಕೆ ಎಷ್ಟು?
ಷೇರಿನ ಬೆಲೆ ಶ್ರೇಣಿ: ಪ್ರತಿ ಷೇರಿಗೆ ₹1,065 ರಿಂದ ₹1,119.
ಲಾಟ್ ಸೈಜ್: ಕನಿಷ್ಠ 12 ಷೇರುಗಳು.
ಕನಿಷ್ಠ ಹೂಡಿಕೆ ಮೊತ್ತ: ಸಾರ್ವಜನಿಕರು ಒಂದು ಲಾಟ್ಗೆ ಅರ್ಜಿ ಸಲ್ಲಿಸಲು ಕನಿಷ್ಠ ₹13,428 ಹೂಡಿಕೆ ಮಾಡಬೇಕಾಗುತ್ತದೆ.
ಪ್ರಮುಖ ದಿನಾಂಕಗಳು:
ಐಪಿಒ ಆರಂಭ: ಅಕ್ಟೋಬರ್ 21, 2026 (ಬುಧವಾರ)
ಐಪಿಒ ಮುಕ್ತಾಯ: ಅಕ್ಟೋಬರ್ 23, 2026 (ಶುಕ್ರವಾರ)
ಷೇರು ಹಂಚಿಕೆ: ಅಕ್ಟೋಬರ್ 26, 2026
ಷೇರು ಮಾರುಕಟ್ಟೆ ಪ್ರವೇಶ: ಅಕ್ಟೋಬರ್ 28, 2026
ಐಪಿಒನ ಪ್ರಮುಖ ವಿಶೇಷತೆಗಳು:
100% ಹೊಸ ಷೇರುಗಳು:
ಈ ಐಪಿಒ ಮೂಲಕ ಸಂಗ್ರಹವಾಗುವ ಸಂಪೂರ್ಣ ಬಂಡವಾಳವು ಹೊಸ ಷೇರುಗಳ ವಿತರಣೆಯದ್ದಾಗಿದ್ದು, ಯಾವುದೇ ಆಫರ್ ಫಾರ್ ಸೇಲ್ (OFS) ಇರುವುದಿಲ್ಲ. ಈ ಹಣವನ್ನು ಕಂಪನಿಯ ಭವಿಷ್ಯದ ಅಭಿವೃದ್ಧಿ ಹಾಗೂ ಸಾಲ ಮರುಪಾವತಿಗೆ ಬಳಸಲಾಗುತ್ತದೆ.
ರಿಲಯನ್ಸ್ ಷೇರುದಾರರಿಗೆ ಭರ್ಜರಿ ಕೊಡುಗೆ:
ರಿಲಯನ್ಸ್ ಇಂಡಸ್ಟ್ರೀಸ್ನ (RIL) ಹಾಲಿ ಅರ್ಹ ಷೇರುದಾರರಿಗಾಗಿ ₹2,500 ಕೋಟಿ ಮೌಲ್ಯದ ಷೇರುಗಳನ್ನು ಕಾಯ್ದಿರಿಸಲಾಗಿದೆ. ಅಕ್ಟೋಬರ್ 14, 2026 ರೊಳಗೆ RIL ಷೇರು ಹೊಂದಿರುವವರು ಈ ಕೋಟಾದಡಿ ಅರ್ಜಿ ಸಲ್ಲಿಸಬಹುದು.
ಉದ್ಯೋಗಿಗಳಿಗೆ ವಿಶೇಷ ರಿಯಾಯಿತಿ:
ಕಂಪನಿಯ ಉದ್ಯೋಗಿಗಳಿಗೆ ₹500 ಕೋಟಿ ಮೌಲ್ಯದ ಷೇರುಗಳನ್ನು ಮೀಸಲಿಡಲಾಗಿದ್ದು, ಪ್ರತಿ ಷೇರಿಗೆ ₹54 ರಿಯಾಯಿತಿ ಘೋಷಿಸಲಾಗಿದೆ.
ಈ ಹಣವನ್ನು ಜಿಯೋ ಎಲ್ಲಿ ಬಳಸಲಿದೆ?
ಸಂಗ್ರಹವಾಗಲಿರುವ ಒಟ್ಟು ಮೊತ್ತದಲ್ಲಿ ಸುಮಾರು ₹27,500 ಕೋಟಿ ಹಣವನ್ನು ಜಿಯೋ ಪ್ಲಾಟ್ಫಾರ್ಮ್ಸ್ನ ಪ್ರಮುಖ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಹೊಂದಿರುವ ಹಳೆಯ ಸಾಲಗಳನ್ನು ಸಂಪೂರ್ಣ ಅಥವಾ ಭಾಗಶಃ ಮರುಪಾವತಿ ಮಾಡಲು ಬಳಸಲಾಗುತ್ತದೆ. ಉಳಿದ ಹಣವನ್ನು ಕಂಪನಿಯ ಸಾಮಾನ್ಯ ಕಾರ್ಪೊರೇಟ್ ಅಗತ್ಯಗಳಿಗಾಗಿ ಬಳಸಲಾಗುವುದು.