ಇನ್ಮುಂದೆ ನಕಲಿ ಡಿಸ್ಕೌಂಟ್‌, ಸುಳ್ಳು ಆಫರ್‌ಗಳಿಗೆ ಬೀಳಲಿದೆ ಬ್ರೇಕ್!  AI Image
ವಾಣಿಜ್ಯ

ಇನ್ಮುಂದೆ ನಕಲಿ ಡಿಸ್ಕೌಂಟ್‌, ಸುಳ್ಳು ಆಫರ್‌ಗಳಿಗೆ ಬೀಳಲಿದೆ ಬ್ರೇಕ್! ಆನ್‌ಲೈನ್ ಶಾಪಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ

ಇನ್ಮುಂದೆ ಆನ್‌ಲೈನ್ ಶಾಪಿಂಗ್‌ನಲ್ಲಿ ನಕಲಿ ರಿಯಾಯಿತಿ-ದಿಕ್ಕುತಪ್ಪಿಸುವ ಜಾಹೀರಾತುಗಳಿಗೆ ಅವಕಾಶವಿಲ್ಲ! ಯಾಕಂದ್ರೆ, ಸರ್ಕಾರ, ಇ-ಕಾಮರ್ಸ್ ನಿಯಮಗಳಲ್ಲಿ ತಿದ್ದುಪಡಿ ತಂದಿದ್ದು, ಡಾರ್ಕ್ ಪ್ಯಾಟರ್ನ್ಸ್ ನಿಯಂತ್ರಣ, ಮೂಲ ಬೆಲೆಯ ಸ್ಪಷ್ಟತೆ ಮತ್ತು ಪ್ರಾಡಕ್ಟ್ ವಿವರಗಳನ್ನು ಕಡ್ಡಾಯ ಮಾಡಿದೆ.

ನವದೆಹಲಿ: ಹಬ್ಬ ಬಂತೂ ಅಂದರೆ ಸಾಕು ಇ-ಕಾಮರ್ಸ್ ಆ್ಯಪ್‌ಗಳಲ್ಲಿ ಡಿಸ್ಕೌಂಟ್‌ಗಳ ಅಬ್ಬರ! ದಸರಾ - ದೀಪಾವಳಿ ಸೇಲ್, ವರ್ಷಾಂತ್ಯದ ಸೇಲ್, ಬಚತ್ ಧಮಾಕಾ ಸೇಲ್, ಪ್ರೈಮ್ ಸೇಲ್, ಮೆಂಬರ್ಶಿಪ್ ಸೇಲ್ ಹೀಗೆ ವರ್ಷವಿಡೀ ಒಂದಲ್ಲಾ ಒಂದು ಸೇಲ್ ಹೆಸರಿನಲ್ಲಿ ವಸ್ತುಗಳ ಬೆಲೆ ಹೆಚ್ಚಳ ಮಾಡಿ, ಸೇಲ್ ಸಂದರ್ಭ ಡಿಸ್ಕೌಂಟ್‌ ಎಂದು ದರ ಕಡಿಮೆ ಮಾಡುವ ಕ್ವಿಕ್-ಕಾಮರ್ಸ್ ಮತ್ತು ಇ-ಕಾಮರ್ಸ್ ಕಂಪನಿಗಳಿಗೆ ಲಗಾಮು ಹಾಕಲು, ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಆನ್‌ಲೈನ್ ಶಾಪಿಂಗ್ ಮಾಡುವ ಗ್ರಾಹಕರ ಹಿತರಕ್ಷಣೆಗಾಗಿ 'ಗ್ರಾಹಕ ರಕ್ಷಣೆ (ಇ-ಕಾಮರ್ಸ್) (ತಿದ್ದುಪಡಿ) ನಿಯಮಗಳು, 2026' ಅನ್ನು ಬಿಡುಗಡೆ ಮಾಡಿದೆ. ಈ ಹೊಸ ನಿಯಮಗಳು ಜನವರಿ 1, 2027ರಿಂದ ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿವೆ. ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮೋಸವಾಗುವುದನ್ನು ತಡೆಯಲು ತರಲಾಗಿರುವ ಪ್ರಮುಖ 7 ಬದಲಾವಣೆಗಳು ಇಲ್ಲಿವೆ..

  • ನಕಲಿ ರಿಯಾಯಿತಿಗಳಿಗೆ ಬ್ರೇಕ್:

ಇನ್ಮುಂದೆ ಯಾವುದೇ ಉತ್ಪನ್ನಕ್ಕೆ ಡಿಸ್ಕೌಂಟ್ (ರಿಯಾಯಿತಿ) ಪ್ರಕಟಿಸುವಾಗ ಇ-ಕಾಮರ್ಸ್ ಕಂಪನಿಗಳು ಕೇವಲ ಆಫರ್ ಬೆಲೆಯನ್ನು ಮಾತ್ರ ತೋರಿಸುವಂತಿಲ್ಲ. ಅದರ ಜೊತೆಗೆ ಹಿಂದಿನ ಬೆಲೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. 'ಹಿಂದಿನ ಬೆಲೆ' ಎಂದರೆ ರಿಯಾಯಿತಿ ಘೋಷಿಸುವ ಮುನ್ನಾ 30 ದಿನಗಳಲ್ಲಿ ಆ ಉತ್ಪನ್ನಕ್ಕಿದ್ದ ಅತ್ಯಂತ ಕನಿಷ್ಠ ಬೆಲೆಯಾಗಿದೆ. ಇದರಿಂದ ಹಬ್ಬಗಳ ಹೆಸರಿನಲ್ಲಿ ಬೆಲೆ ಹೆಚ್ಚಿಸಿ ನಂತರ ಸುಳ್ಳು ಡಿಸ್ಕೌಂಟ್ ನೀಡುವುದನ್ನು ತಡೆಯಬಹುದು.

  • ಸರ್ಚ್ ರಿಸಲ್ಟ್ ತಿರುಚುವಿಕೆಗೆ ನಿಷೇಧ:

ಗ್ರಾಹಕರು ಇ-ಕಾಮರ್ಸ್ ಆ್ಯಪ್‌ಗಳಲ್ಲಿ ಉತ್ಪನ್ನಗಳನ್ನು ಹುಡುಕಿದಾಗ (ಸರ್ಚ್ ಮಾಡಿದಾಗ), ಕಂಪನಿಗಳು ತಮ್ಮ ಸ್ವಂತ ಬ್ರ್ಯಾಂಡ್‌ಗಳನ್ನು ಅಥವಾ ತಮಗೆ ಹೆಚ್ಚು ಕಮಿಷನ್ ಕೊಡುವ ಮಾರಾಟಗಾರರ ಉತ್ಪನ್ನಗಳನ್ನು ಮೊದಲ ಸಾಲಿನಲ್ಲಿ ಬರುವಂತೆ ಸರ್ಚ್ ರಿಸಲ್ಟ್ ತಿರುಚುವಂತಿಲ್ಲ.

  • ಪ್ರಾಯೋಜಿತ ಉತ್ಪನ್ನಗಳ ಸ್ಪಷ್ಟ ಪ್ರದರ್ಶನ:

ಆನ್‌ಲೈನ್‌ನಲ್ಲಿ ಜಾಹೀರಾತು ಹಣ ಪಡೆದು ಪ್ರದರ್ಶಿಸುವ ಉತ್ಪನ್ನಗಳ ಮೇಲೆ 'Sponsored' ಅಥವಾ 'Ad' ಎಂದು ಗ್ರಾಹಕರಿಗೆ ಸ್ಪಷ್ಟವಾಗಿ ಕಾಣಿಸುವಂತೆ ನಮೂದಿಸಬೇಕು.

  • ಡಾರ್ಕ್ ಪ್ಯಾಟರ್ನ್ ತಡೆಗೆ ಆಡಿಟ್:

ಗ್ರಾಹಕರಿಗೆ ಗೊತ್ತಿಲ್ಲದಂತೆ ಬಿಲ್‌ನಲ್ಲಿ ಹೆಚ್ಚುವರಿ ಶುಲ್ಕ ಸೇರಿಸುವುದು, ಒಪ್ಪಿಗೆಯಿಲ್ಲದೆ ಸಬ್‌ಸ್ಕ್ರಿಪ್ಷನ್ ಬಲೆಗೆ ಬೀಳಿಸುವುದು ಮುಂತಾದ ಮೋಸದ ತಂತ್ರಗಳನ್ನು ಬಳಸುವಂತಿಲ್ಲ. ಇದಕ್ಕಾಗಿ ಕಂಪನಿಗಳು ವರ್ಷಕ್ಕೊಮ್ಮೆ ಸ್ವಯಂ-ಲೆಕ್ಕಪರಿಶೋಧನೆ ನಡೆಸಿ, ತಾವು ನಿಯಮ ಪಾಲಿಸುತ್ತಿರುವ ಪ್ರಮಾಣಪತ್ರವನ್ನು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಬೇಕು.

  • ಬಂಡಲ್ಡ್ ಶುಲ್ಕಗಳ ವಸೂಲಾತಿಗೆ ಇಲ್ಲ ಅವಕಾಶ:

ಇ-ಕಾಮರ್ಸ್ ವಹಿವಾಟಿಗೆ ನೇರವಾಗಿ ಸಂಬಂಧಪಡದ ಯಾವುದೇ ಅನಗತ್ಯ ಸೇವೆಗಳಿಗೆ (ಉದಾಹರಣೆಗೆ ಗ್ರಾಹಕರ ಒಪ್ಪಿಗೆಯಿಲ್ಲದೆ ಇನ್ಶೂರೆನ್ಸ್ ಅಥವಾ ಡೊನೇಶನ್ ಶುಲ್ಕವನ್ನು ಆಟೋ-ಆಡ್ ಮಾಡುವುದು) ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ.

  • ಆಮದು ಉತ್ಪನ್ನಗಳ ಕಡ್ಡಾಯ ವಿವರ:

ವಿದೇಶಗಳಿಂದ ಆಮದು ಮಾಡಿಕೊಂಡ ಸರಕುಗಳಿದ್ದಲ್ಲಿ, ಆಮದುದಾರರ ಸಂಪೂರ್ಣ ವಿವರ ಹಾಗೂ ಆ ಉತ್ಪನ್ನದ ಮೂಲ ದೇಶದ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು. ಇದರೊಂದಿಗೆ ಪದಾರ್ಥಗಳ ಎಕ್ಸ್‌ಪೈರಿ ದಿನಾಂಕ ಮತ್ತು ವಾರಂಟಿ ವಿವರಗಳನ್ನು ಸುಲಭವಾಗಿ ಕಾಣುವಂತೆ ನೀಡಬೇಕು.

  • ಗ್ರಾಹಕರ ಡೇಟಾ ದುರ್ಬಳಕೆ ನಿಷೇಧ:

ಗ್ರಾಹಕರ ಸ್ಪಷ್ಟ ಒಪ್ಪಿಗೆಯಿಲ್ಲದೆ ಅವರ ವೈಯಕ್ತಿಕ ಮಾಹಿತಿ ಅಥವಾ ಶಾಪಿಂಗ್ ಇತಿಹಾಸದ ಡೇಟಾವನ್ನು ಕಂಪನಿಗಳು ತಮ್ಮದೇ ಆದ ಪ್ರೈವೇಟ್ ಲೇಬಲ್ ಉತ್ಪನ್ನಗಳನ್ನು ಪ್ರಮೋಟ್ ಮಾಡಲು ಬಳಸುವಂತಿಲ್ಲ. ಅಲ್ಲದೆ ಎಲ್ಲಾ ಇ-ಕಾಮರ್ಸ್ ಕಂಪನಿಗಳು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಪ್ರಕ್ರಿಯೆಯೊಂದಿಗೆ ಕಡ್ಡಾಯವಾಗಿ ಕೈಜೋಡಿಸಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಗ್ಲೋಬಲ್ ಸೌತ್' ನಿಯಮ-ರೂಪಿಸುವ ಶಕ್ತಿಯಾಗಬೇಕು, ಅದರ ನೇತೃತ್ವ ವಹಿಸಲು ಭಾರತ ಸಿದ್ಧ": BRICS ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಗಂಡನ ಕೊಲೆ; ಮುಖ, ಮರ್ಮಾಂಗಕ್ಕೆ ಗಾಯ, ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ!

ಟ್ರ್ಯಾಕ್ಟರ್‌ ಸಾಲ, ವರದಕ್ಷಿಣೆ ಕಿರುಕುಳ ಆರೋಪ; 10 ತಿಂಗಳ ಮದುವೆ, 5 ತಿಂಗಳ ಗರ್ಭಿಣಿ ದುರಂತ ಅಂತ್ಯ!

BRICS 'ನವದೆಹಲಿ ಘೋಷಣೆ 2026' ಗೆ ಸರ್ವಾನುಮತದ ಅಂಗೀಕಾರ: ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ಪ್ರಗತಿ

'ಹಿಂಸೆ ಅಥವಾ ಗ್ಲಾಮರ್‌ಗೆ ಸೀಮಿತವಾಗಿಲ್ಲ, ವಯಸ್ಕರಿಗಾಗಿ ಮಾಡಿದ ವಿಭಿನ್ನ ಕಥೆ'; ಯಶ್ ರ Toxic ಕುರಿತು ಟೀಕಾಕಾರರಿಗೆ ಬಟ್ಟೆ ಸುತ್ತಿ ಹೊಡೆದ ಹಾಲಿವುಡ್ ನಟ!