ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತಗಳ ನಡುವೆಯೇ ಭಾರತೀಯ ಇಂಧನ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನಗಳ ರಫ್ತಿನ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 16 ರಿಂದಲೇ ಜಾರಿಗೆ ಬಂದಿರುವ ಈ ದಿಢೀರ್ ನಿರ್ಧಾರಕ್ಕೆ ಜಾಗತಿಕ ಮಾರುಕಟ್ಟೆಯ ದರ ಬದಲಾವಣೆಗಳೇ ಕಾರಣವಾಗಿದ್ದು, ರಫ್ತುದಾರರಿಗೆ ದೊಡ್ಡ ಸಮಾಧಾನ ತಂದಿದೆ. ಹಾಗಾದರೆ ಪ್ರತಿ ಲೀಟರ್ ಇಂಧನದ ಮೇಲಿನ ತೆರಿಗೆ ಎಷ್ಟು ಇಳಿಕೆಯಾಗಿದೆ? ಈ ಬದಲಾವಣೆಯ ಹಿಂದಿನ ಸಂಪೂರ್ಣ ವಿವರ ಇಲ್ಲಿದೆ...
ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆಯ ಪ್ರಕಾರ, ಪೆಟ್ರೋಲ್ ರಫ್ತು ಮೇಲಿನ ಪ್ರತಿ ಲೀಟರ್‌ಗೆ ಇದ್ದ ₹1.5 ತೆರಿಗೆಯನ್ನು ₹0.50 ಗೆ ಇಳಿಸಲಾಗಿದೆ. ಜೊತೆಗೆ, ಡೀಸೆಲ್ ರಫ್ತು ಮೇಲಿನ ಪ್ರತಿ ಲೀಟರ್‌ಗೆ ಇದ್ದ ₹25 ತೆರಿಗೆಯನ್ನು ₹20 ಗೆ ಕಡಿತಗೊಳಿಸಲಾಗಿದೆ. ಜೊತೆಗೆ, ಈ ಹಿಂದೆ ಇದ್ದ ರೋಡ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಸೆಸ್ ಅನ್ನು ಶೂನ್ಯಕ್ಕಿಳಿಸಲಾಗಿದೆ. ಇದರೊಂದಿಗೆ, ಎಟಿಎಫ್ (ವಿಮಾನ ಇಂಧನ) ರಫ್ತು ಮೇಲಿನ ಪ್ರತಿ ಲೀಟರ್‌ಗೆ ಇದ್ದ ₹19 ತೆರಿಗೆಯನ್ನು ₹15 ಗೆ ಇಳಿಸಲಾಗಿದೆ.
ಏನಿದು ಅನಿರೀಕ್ಷಿತ ಲಾಭದ ತೆರಿಗೆ?
ತೈಲ ಕಂಪನಿಗಳು ತಮ್ಮ ಯಾವುದೇ ಹೆಚ್ಚುವರಿ ಶ್ರಮ ಅಥವಾ ಹೂಡಿಕೆ ಇಲ್ಲದೆ, ಕೇವಲ ಜಾಗತಿಕ ಪರಿಸ್ಥಿತಿಗಳಿಂದಾಗಿ (ಉದಾಹರಣೆಗೆ ಯುದ್ಧ ಅಥವಾ ಅಂತರರಾಷ್ಟ್ರೀಯ ಬಿಕ್ಕಟ್ಟು) ಅನಿರೀಕ್ಷಿತವಾಗಿ ಗಳಿಸುವ ಭಾರಿ ಲಾಭದ ಮೇಲೆ ಸರ್ಕಾರ ವಿಧಿಸುವ ವಿಶೇಷ ತೆರಿಗೆಯೇ ಈ ವಿಂಡ್‌ಫಾಲ್ ಟ್ಯಾಕ್ಸ್. ಅದರಂತೆ, ಭಾರತದ ರಿಫೈನರಿ ಕಂಪನಿಗಳು ದೇಶದ ಒಳಗಿನ ಮಾರುಕಟ್ಟೆಯಲ್ಲಿ ಇಂಧನ ಮಾರುವುದಕ್ಕಿಂತ, ವಿದೇಶಗಳಿಗೆ ರಫ್ತು ಮಾಡಿದಾಗ ಅತಿ ಹೆಚ್ಚು ಲಾಭ ಗಳಿಸುತ್ತಿದ್ದವು. ಈ ಲಾಭದ ಒಂದು ಪಾಲನ್ನು ಪಡೆಯಲು ಸರ್ಕಾರ 2022 ರಲ್ಲಿ ಮೊದಲ ಬಾರಿಗೆ ಈ ತೆರಿಗೆಯನ್ನು ಜಾರಿಗೆ ತಂದಿತ್ತು.
ಹಾಗಾದ್ರೆ, ಸಾಮಾನ್ಯ ಗ್ರಾಹಕರ ಮೇಲಾಗುವ ಪರಿಣಾಮಗಳೇನು?
ಈ ತೆರಿಗೆ ಕಡಿತವು ಕೇವಲ ಭಾರತದಿಂದ ವಿದೇಶಗಳಿಗೆ ಇಂಧನವನ್ನು ರಫ್ತು ಮಾಡುವ ದೊಡ್ಡ ಕಂಪನಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅದರಂತೆ, ನಮ್ಮ ದೇಶದ ಒಳಗಿನ ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುವ ಇಂಧನದ ಮೇಲಿನ ತೆರಿಗೆಯನ್ನು ಸರ್ಕಾರ ಕಡಿಮೆ ಮಾಡಿಲ್ಲ. ಹಾಗಾಗಿ, ಈ ನಿರ್ಧಾರದಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಸಾಮಾನ್ಯ ಜನರಿಗೆ ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಕಡಿಮೆ ಆಗುವುದಿಲ್ಲ.