ಪ್ಲಂಬರ್ ಗಳು ಮತ್ತು ಎಲೆಕ್ಟ್ರಿಷಿಯನ್ ಗಳು 
ವೃತ್ತಿ & ಉದ್ಯೋಗ ಅವಕಾಶಗಳು

Blue-Collar Blackout: ಇನ್ನೈದು ವರ್ಷಗಳಲ್ಲಿ ಪ್ಲಂಬರ್‌, ಎಲೆಕ್ಟ್ರಿಷಿಯನ್ ಗಳೇ ಸಿಗಲ್ಲ.. ತಜ್ಞರ ಎಚ್ಚರಿಕೆ

ಕೆನಡಾ ಮೂಲದ ಮ್ಯಾಕ್ರೋ ಟ್ರೆಂಡ್ಸ್ ಸಂಶೋಧನಾ ಸಂಸ್ಥೆ ಪೈನ್‌ಟ್ರೀ ಸಂಸ್ಥಾಪಕ ರಿತೇಶ್ ಜೈನ್ ಈ ಎಚ್ಚರಿಕೆ ನೀಡಿದ್ದು, ಭಾರತದಲ್ಲಿ ಎಂಜಿನಿಯರ್‌ಗಳಿಗಿಂತ ಮೊದಲು ಪ್ಲಂಬರ್‌ಗಳ ಕೊರತೆ ಉಂಟಾಗಬಹುದು ಎಂದು ಹೇಳಿದ್ದಾರೆ.

ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ ದೇಶದಲ್ಲಿ ಕೇವಲ ಇನ್ನೈದು ವರ್ಷಗಳಲ್ಲಿ Blue-Collar ಕಾರ್ಮಿಕರ ಗಂಭೀರ ಕೊರತೆ ಎದುರಾಗಲಿದ್ದು, ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್ ಗಳಂತಹ ಬ್ಲೂಕಾಲರ್ ಉದ್ಯೋಗಿಗಳ ಕೊರತೆ ಎದುರಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೆನಡಾ ಮೂಲದ ಮ್ಯಾಕ್ರೋ ಟ್ರೆಂಡ್ಸ್ ಸಂಶೋಧನಾ ಸಂಸ್ಥೆ ಪೈನ್‌ಟ್ರೀ ಸಂಸ್ಥಾಪಕ ರಿತೇಶ್ ಜೈನ್ (Ritesh Jain) ಈ ಎಚ್ಚರಿಕೆ ನೀಡಿದ್ದು, ಭಾರತದಲ್ಲಿ ಎಂಜಿನಿಯರ್‌ಗಳಿಗಿಂತ ಮೊದಲು ಪ್ಲಂಬರ್‌ಗಳ ಕೊರತೆ ಉಂಟಾಗಬಹುದು ಎಂದು ಹೇಳಿದ್ದಾರೆ.

ಲಿಂಕ್ಡ್‌ಇನ್‌ನಲ್ಲಿ ಬರೆದಿರುವ ಪೋಸ್ಟ್‌ನಲ್ಲಿ ಅವರು, "ಜಗತ್ತಿನಲ್ಲಿ ನೀಲಿ ಕಾಲರ್ (Blue-Collar) ಉದ್ಯೋಗಿಗಳ ಕೊರತೆಯಿದ್ದು, ಬಿಳಿ ಕಾಲರ್ (White-Collar) ಉದ್ಯೋಗಿಗಳು ಹೆಚ್ಚಾಗಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್‌ಗಳು, ಕಾರ್ಪೆಂಟರ್‌ಗಳು, ಚಾಲಕರು, ನರ್ಸ್‌ಗಳು ಹಾಗೂ ಆರೈಕೆ ಸಿಬ್ಬಂದಿಗಳ ತೀವ್ರ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕಾರಣ, ಶ್ರೀಮಂತ ರಾಷ್ಟ್ರಗಳು ತಮ್ಮ ದೇಶಗಳಲ್ಲಿ ಕೊರತೆಯಾಗಿರುವ ಈ ಉದ್ಯೋಗಿಗಳನ್ನು ಭಾರತದಿಂದ ದೊಡ್ಡ ಪ್ರಮಾಣದಲ್ಲಿ ನೇಮಿಸಿಕೊಳ್ಳಲು ಮುಂದಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವೃದ್ಧ ಜನಸಂಖ್ಯೆ, ಕಡಿಮೆಯಾಗುತ್ತಿರುವ ಜನನ ಪ್ರಮಾಣ

ಯುರೋಪ್ ಸೇರಿದಂತೆ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ವೃದ್ಧ ಜನಸಂಖ್ಯೆ, ಕುಸಿಯುತ್ತಿರುವ ಜನನ ಪ್ರಮಾಣ ಹಾಗೂ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿವೆ. ವಿಶ್ವಸಂಸ್ಥೆಯ ಅಂದಾಜುಗಳ ಪ್ರಕಾರ, 1970ರ ದಶಕದಿಂದ ಜಾಗತಿಕವಾಗಿ 65 ವರ್ಷ ಮೇಲ್ಪಟ್ಟವರ ಪ್ರಮಾಣ ದ್ವಿಗುಣಗೊಂಡಿದ್ದು, 2070ರ ವೇಳೆಗೆ ಮತ್ತೊಮ್ಮೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ.

ಅಲ್ಲದೆ, ವಿಶ್ವ ಜನಸಂಖ್ಯಾ ನಿಧಿ (UNFPA) ವರದಿ ಪ್ರಕಾರ, ವಿಶ್ವದ 60% ಕ್ಕೂ ಹೆಚ್ಚು ಜನರು ಜನಸಂಖ್ಯೆ ಸ್ಥಿರವಾಗಿರಲು ಅಗತ್ಯವಿರುವ ಮಟ್ಟಕ್ಕಿಂತ ಕಡಿಮೆ ಜನನ ಪ್ರಮಾಣ ಹೊಂದಿರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಕಾರ್ಮಿಕರ ಕೊರತೆ

ನಿರ್ಮಾಣ ಕಾರ್ಮಿಕರು, ಮೆಕ್ಯಾನಿಕ್‌ಗಳು, ಎಲೆಕ್ಟ್ರಿಷಿಯನ್‌ಗಳು, ಆರೈಕೆ ಸಿಬ್ಬಂದಿ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರದ ಉದ್ಯೋಗಿಗಳನ್ನು ಹುಡುಕುವುದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ದೊಡ್ಡ ಸವಾಲಾಗಿದೆ. ಅನುಭವಿಗಳಾದ ಉದ್ಯೋಗಿಗಳು ನಿವೃತ್ತಿಯಾಗುತ್ತಿರುವಾಗ, ಯುವ ಪೀಳಿಗೆ ಈ ವೃತ್ತಿಗಳತ್ತ ಆಸಕ್ತಿ ತೋರದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಯುರೋಪಿಯನ್ ಒಕ್ಕೂಟದ (EU) ಸಮೀಕ್ಷೆಯ ಪ್ರಕಾರ, 2023ರಲ್ಲಿ ಸುಮಾರು 75% ಕಂಪನಿಗಳು ಸೂಕ್ತ ಕೌಶಲ್ಯ ಹೊಂದಿದ ಉದ್ಯೋಗಿಗಳನ್ನು ಹುಡುಕಲು ಕಷ್ಟಪಟ್ಟಿವೆ. ಇದು ಐದು ವರ್ಷಗಳ ಹಿಂದಿನ ಪ್ರಮಾಣಕ್ಕಿಂತ ಸುಮಾರು ದ್ವಿಗುಣವಾಗಿದೆ. ಜರ್ಮನಿಯಲ್ಲಿ 2024ರಲ್ಲಿ 80% ಕ್ಕೂ ಹೆಚ್ಚು ಉದ್ಯೋಗದಾತರು ನೇಮಕಾತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಎಲೆಕ್ಟ್ರಿಷಿಯನ್‌ಗಳು, ವೆಲ್ಡರ್‌ಗಳು, ಮೆಕ್ಯಾನಿಕ್‌ಗಳು ಹಾಗೂ HVAC ತಂತ್ರಜ್ಞರು ಯುರೋಪಿನಲ್ಲಿ ಅತ್ಯಂತ ಬೇಡಿಕೆಯ ವೃತ್ತಿಗಳಾಗಿವೆ. ಅಮೆರಿಕದಲ್ಲಿಯೂ ಇದೇ ಪರಿಸ್ಥಿತಿ ಕಂಡುಬರುತ್ತಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಲಕ್ಷಾಂತರ ಪ್ಲಂಬರ್‌ಗಳ ಕೊರತೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

ಅಸಮತೋಲನ ಆಪಾಯವಿದೆ.. ಆದ್ರೆ

ರಿತೇಶ್ ಜೈನ್ ಅವರ ಪ್ರಕಾರ, 'ಭಾರತದಲ್ಲಿ ಅಪಾಯಕಾರಿ ಅಸಮತೋಲನ ರೂಪುಗೊಳ್ಳುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್‌ಗಳು, ಕಾರ್ಪೆಂಟರ್‌ಗಳು, ಚಾಲಕರು, ನರ್ಸ್‌ಗಳು ಮತ್ತು ಆರೈಕೆ ಸಿಬ್ಬಂದಿಗಳ ಕೊರತೆ ಭಾರತದಲ್ಲಿ ಉಂಟಾಗಲಿದೆ. ಏಕೆಂದರೆ ಅವರು ಹೆಚ್ಚಿನ ಆದಾಯದ ರಾಷ್ಟ್ರಗಳಿಗೆ ವಲಸೆ ಹೋಗಲಿದ್ದಾರೆ" ಎಂದು ಅವರು ಹೇಳಿದ್ದಾರೆ.

"ಆದರೆ ಚಿಂತಿಸಬೇಡಿ. ಭಾರತದಲ್ಲಿ ಉದ್ಯೋಗವಿಲ್ಲದ ಬಿಳಿ ಕಾಲರ್ ಪದವೀಧರರು ಉಳಿಯುತ್ತಾರೆ. ಅವರ ಕೌಶಲ್ಯಗಳಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಯೂ ಬೇಡಿಕೆ ಇರುವುದಿಲ್ಲ" ಎಂದು ಅವರು ವ್ಯಂಗ್ಯವಾಗಿ ಅಭಿಪ್ರಾಯಪಟ್ಟಿದ್ದಾರೆ.

"ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಭಾರತೀಯ ಕಾರ್ಮಿಕರೇ ಉತ್ತರ"

"ಹೆಚ್ಚು ಆದಾಯದ ರಾಷ್ಟ್ರಗಳು ಜನಸಂಖ್ಯಾ ಕುಸಿತವನ್ನು ಎದುರಿಸುತ್ತಿವೆ. ಅದಕ್ಕೆ ಭಾರತೀಯ ನೀಲಿ ಕಾಲರ್ ಉದ್ಯೋಗಿಗಳೇ ಉತ್ತರ" ಎಂದು ರಿತೇಶ್ ಜೈನ್ ಹೇಳಿದ್ದಾರೆ. ಜನಸಂಖ್ಯಾ ತಜ್ಞರು ಇದನ್ನು "ವೃದ್ಧ ಸಮಾಜ" ಹಾಗೂ "ಕುಗ್ಗುತ್ತಿರುವ ಕಾರ್ಯನಿರತ ವಯೋಮಾನದ ಜನಸಂಖ್ಯೆ" ಎಂದು ವಿವರಿಸುತ್ತಾರೆ. ಇದರಿಂದ ಕಲ್ಯಾಣ ಯೋಜನೆಗಳು ಮತ್ತು ಆರೈಕೆ ವ್ಯವಸ್ಥೆಗಳ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ.

ವಲಸೆ ನೀತಿಗಳಲ್ಲೂ ಬದಲಾವಣೆ

ಜೈನ್ ಅವರ ಪ್ರಕಾರ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಲಸೆ ಕುರಿತ ಮನೋಭಾವವೂ ಬದಲಾಗುತ್ತಿದೆ. "ನಿಯಂತ್ರಣವಿಲ್ಲದ ವಲಸೆಯ ಮೇಲಿನ ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರೀತಿ ಕೊನೆಗೊಂಡಿದೆ. ಕೆಲವು ವಲಸಿಗರು ಅಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳದೆ, ಅದನ್ನೇ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. ಇದರಿಂದಾಗಿ, ಭವಿಷ್ಯದಲ್ಲಿ ಸಾಮಾನ್ಯ ವಲಸೆ ಬದಲಾಗಿ, ನಿರ್ದಿಷ್ಟ ಕೌಶಲ್ಯ ಹೊಂದಿದ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡ ಆರ್ಥಿಕ ವಲಸೆ ಯೋಜನೆಗಳಿಗೆ ಆದ್ಯತೆ ಸಿಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ಅವಕಾಶವೇ? ಸವಾಲೇ?

ಭಾರತವು ಈಗಾಗಲೇ ನರ್ಸ್‌ಗಳು, ಆರೈಕೆ ಸಿಬ್ಬಂದಿ ಹಾಗೂ ನಿರ್ಮಾಣ ಕಾರ್ಮಿಕರನ್ನು ವಿದೇಶಗಳಿಗೆ ಕಳುಹಿಸುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ವಿದ್ಯುತ್ ತಂತ್ರಜ್ಞರು, ನಿರ್ಮಾಣ ಕಾರ್ಮಿಕರು ಹಾಗೂ ಇತರೆ ಕೌಶಲ್ಯಾಧಾರಿತ ವೃತ್ತಿಗಳ ಉದ್ಯೋಗಿಗಳನ್ನು ಆಕರ್ಷಿಸಲು ಅನೇಕ ರಾಷ್ಟ್ರಗಳು ವಿಶೇಷ ವೀಸಾ ಯೋಜನೆಗಳನ್ನು ರೂಪಿಸುತ್ತಿವೆ. ಆದರೆ ಇದೇ ವೇಳೆ ಭಾರತದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ.

ಪದವೀಧರರಿಗೆ ಉದ್ಯೋಗವಿಲ್ಲ

ಭಾರತದಲ್ಲಿ ಲಕ್ಷಾಂತರ ಯುವಕರು ಪದವಿ ಪಡೆದು ಹೊರಬರುತ್ತಿದ್ದರೂ, ವೈಟ್ ಕಾಲರ್ ಉದ್ಯೋಗ ಮಾರುಕಟ್ಟೆ ಈಗಾಗಲೇ ತುಂಬಿಹೋಗಿದೆ. ವಿವಿಧ ಅಧ್ಯಯನಗಳ ಪ್ರಕಾರ, ಯುವ ಪದವೀಧರರ ನಿರುದ್ಯೋಗ ಪ್ರಮಾಣ ಸುಮಾರು 40% ರಷ್ಟಿದ್ದು, ಕಡಿಮೆ ಶಿಕ್ಷಣ ಪಡೆದ ಯುವಕರಿಗಿಂತಲೂ ಇದು ಹೆಚ್ಚಾಗಿದೆ.

ಕಾರ್ಮಿಕ ಮಾರುಕಟ್ಟೆಗೆ ಪ್ರವೇಶಿಸುವ ಪದವೀಧರರಲ್ಲಿ ಕೇವಲ 14 ಜನರಲ್ಲಿ ಒಬ್ಬರಿಗೆ ಮಾತ್ರ ಮೊದಲ ವರ್ಷದಲ್ಲೇ ಶಾಶ್ವತ ಸಂಬಳದ ಉದ್ಯೋಗ ಸಿಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದೇ ವೇಳೆ ಮುಂದಿನ ದಶಕದಲ್ಲಿ ಭಾರತದಲ್ಲಿ ಸೃಷ್ಟಿಯಾಗಬೇಕಾದ ಹೆಚ್ಚಿನ ಉದ್ಯೋಗಗಳು ಲಾಜಿಸ್ಟಿಕ್ಸ್, ನಿರ್ಮಾಣ, ಉತ್ಪಾದನೆ ಹಾಗೂ ಮೂಲ ಸೇವೆಗಳಂತಹ ನೀಲಿ ಕಾಲರ್ ಕ್ಷೇತ್ರಗಳಲ್ಲೇ ಇರಲಿವೆ ಎಂದು ವರದಿಗಳು ಹೇಳುತ್ತವೆ.

ಆದರೆ ಈ ಉದ್ಯೋಗಗಳು ಅನೌಪಚಾರಿಕ, ಕಡಿಮೆ ಸಂಬಳದ ಹಾಗೂ ಸುರಕ್ಷತೆಯ ಕೊರತೆಯುಳ್ಳವುಗಳಾಗಿರುವುದರಿಂದ ಯುವಜನತೆ ಅವುಗಳತ್ತ ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

New delhi: ಪ್ರಧಾನಿ ನಿವಾಸದ ಹೊರಗಡೆ ಪ್ರತಿಭಟನೆ; ರಾಹುಲ್, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ವಶಕ್ಕೆ ಪಡೆದ ಪೊಲೀಸರು! Video

ಏನಿದು 'ಗ್ರೇಟರ್ ಇಂಟಿಗ್ರೇಟೆಡ್ ಟೌನ್‌ಶಿಪ್'? ಬಿಡದಿಯೇ ಏಕೆ? 7,431 ಎಕರೆ 'AI ಸಿಟಿ'ಯ ಸಂಪೂರ್ಣ ಮಾಹಿತಿ ಇಲ್ಲಿದೆ!

ಮೆರವಣಿಗೆ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ CJP ಪ್ರತಿಭಟನಾಕಾರರು; ಇಂಟರ್ನೆಟ್ ಸ್ಥಗಿತಗೊಂಡರೂ ಗುಂಪುಗಳಿಗೆ ಸಂಪರ್ಕ ಸಾಧನೆ!

Delhi protest crackdown: ಪ್ರಧಾನಿ ಮೋದಿ ನಿವಾಸದ ಹೊರಗೆ ಪ್ರತಿಭಟನೆ ನಿಲ್ಲಿಸಲು ರಾಹುಲ್ ನಕಾರ; ಕಾಂಗ್ರೆಸ್ ನ ಆರು ಬೇಡಿಕೆಗಳೇನು?

ಬರ್ಗರ್ ಯಾಕೆ ತಿಂತಾರೆ? ಅಷ್ಟು ತಿಳಿಯದ ಮೂರ್ಖರ ಸಹವಾಸವೇ ಬೇಡ, ವಜಾಗೊಂಡ CJP ವಕ್ತಾರ ದಹಿಯಾ! VIDEO