ಮಂಗಳೂರು: ಕರಾವಳಿಯಲ್ಲಿ ಕಾಂತಾರಾ VS ದೈವರಾಧಕರ ಸಂಘರ್ಷ ತಾರಕಕ್ಕೇರಿರುವಂತೆಯೇ ಈಗ ದೈವದ ನುಡಿ ಕುರಿತು ದೈವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಚಾಪ್ಟರ್ 1 ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪೆರಾರ ಶ್ರೀ ಬ್ರಹ್ಮ ದೇವರು ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಹೇಳಿದೆ.
ಕಾಂತಾರಾ ಸಿನಿಮಾ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ದೈವಾರಾಧಕರ ಆಕ್ಷೇಪ ತೀವ್ರಗೊಳ್ಳುತ್ತಿದಂತೆ ದೈವಾರಾಧನೆಯ ಅನುಕರಣೆ ವಿರುದ್ಧ ದೈವ ಎಚ್ಚರಿಕೆ ನೀಡಿತ್ತು. ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ನಾನು ಬುದ್ದಿ ಕಲಿಸುತ್ತೇನೆ ಎಂದು ಹೇಳಿತ್ತು.
ಕಂಡಕಂಡಲ್ಲಿ ದೈವದ ಅನುಕರಣೆ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ದ ಬಜಪೆಯ ಪೆರಾರದ ಪಿಲ್ಚಂಡಿ ದೈವವು 'ಹುಚ್ಚು ಕಟ್ಟಿದವರನ್ನ ಹುಚ್ಚು ಹಿಡಿಸುತ್ತೇನೆ' ಮತ್ತು 'ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನು ಆಸ್ಪತ್ರೆಗೆ ಸುರಿಸುತ್ತೇನೆ' ಎಂದು ನುಡಿದಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಚರ್ಚೆ, ವಾದ ನಡೆದು, ಇದು ದೈವ ಹೇಳಿದ್ದಾ, ದೈವ ನರ್ತಕಾ ಹೇಳಿದ್ದಾ? ಎಂದು ಕೆಲವರು ಪ್ರಶ್ನಿಸುವ ಮೂಲಕ ದೈವ ವಾಕ್ಯವನ್ನೇ ಅಪಹಾಸ್ಯ ಮಾಡುತ್ತಿದ್ದರು.
ದೈವಸ್ಥಾನದ ಆಡಳಿತ ಮಂಡಳಿಂದ ಸ್ಪಷ್ಟನೆ ಏನು?
ಕಾಂತಾರ ಸಿನಿಮಾ ಹಾಗೂ ದೈವದ ಅನುಕರಣೆ ಮಾಡಿದವರಿಗೆ ಎಚ್ಚರಿಕೆ ಎಂದು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ದೈವಸ್ಥಾನದ ಆಡಳಿತ ಮಂಡಳಿಯಿಂದಲೇ ಸ್ಪಷ್ಟನೆ ನೀಡಿ ವಿಷಯಕ್ಕೆ ಇತೀಶ್ರೀ ಹಾಡಲು ಮುಂದಾಗಿದೆ.
ಕಾಂತಾರ: ಚಾಪ್ಟರ್ 1 ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪೆರಾರ ಶ್ರೀ ಬ್ರಹ್ಮ ದೇವರು ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಹೇಳಿದೆ.
ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
ಮಂಗಳೂರು ತಾಲೂಕು ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ ಪಿಲಿಚಾಂಡಿ ದೈವಸ್ಥಾನ -ಪಡುಪೆರಾರ ಕ್ಷೇತ್ರದಲ್ಲಿ ನಡೆದ ಬಲವಾಂಡಿ-ಪಿಲಿಚಾಂಡಿ ದೈವಗಳ ಪುದರ್ -ಮೆಚ್ಚಿ ಜಾತ್ರೆ ಸಮಯದ ದೈವಪಾತ್ರಿ ದರ್ಶನ -ದೈವದ ನಡೆ-ನುಡಿಗಳ ಬಗ್ಗೆ ಉಂಟಾದ ಗೊಂದಲ-ಭಿನ್ನಾಭಿಪ್ರಾಯ ವಿಚಾರದಲ್ಲಿ ಆಡಳಿತ ಮಂಡಳಿಯ ಸ್ಪಷ್ಟಿಕರಣ ನೀಡುತ್ತಿದೆ. ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ -ಪಿಲಿಚಾಂಡಿ ದೈವಸ್ಥಾನ, ಪಡುಪೆರಾರ-ಕ್ಷೇತ್ರದಲ್ಲಿ ಶತಮಾನದ ಕಾಲದ ಕಟ್ಟು ಕಟ್ಟುಳೆಯಂತೆ, ಗುತ್ತು ಬರ್ಕೆ ಮಹನೀಯರು ಹಾಗೂ ಗ್ರಾಮಸ್ಥರು, ಸಾರ್ವಜನಿಕರ ಕೂಡವಿಕೆಯಿಂದ ನಡೆಸಲ್ಪಡುವ ಪುರ್-ಮೆಚ್ಚಿ ಜಾತ್ರೆಯು ಇತ್ತೀಚಿಗೆ ಕ್ಷೇತ್ರದಲ್ಲಿ ನಡೆದಿರುತ್ತದೆ. ಈ ಸಂದರ್ಭದಲ್ಲಿ ದೈವದ ಪಾತ್ರಿ-ದೈವವು ನೀಡಿದ ಅಭಯ ನಡೆ ನುಡಿಗಳ ವಿಚಾರದಲ್ಲಿ ಗೊಂದಲ ಭಿನ್ನಾಭಿಪ್ರಾಯ ಏರ್ಪಟ್ಟಿರುವುದು ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ಬಂದಿರುತ್ತದೆ.
ಕ್ಷೇತ್ರದ ಬಲವಾಂಡಿ -ಪಿಲಿಚಾಂಡಿ ದೈವದ ನರ್ತನದ ಬಳಿಕ ನಡೆಯುವ ನಡೆ ನುಡಿಗಳ ಸಂದರ್ಭದಲ್ಲಿ ಕೆಲವೊಂದು ಯುವಕರುಗಳು ದೈವ-ದೇವರ, ಆಚಾರ-ವಿಚಾರದಲ್ಲಿ ಆಗುತ್ತಿರುವ ಅಪಪ್ರಚಾರ ವಿಚಾರದಲ್ಲಿ ದೈವದ ಸಮಕ್ಷಮ ನಿವೇದನೆ ಮಾಡಿ ಕೊಂಡಿರುತ್ತಾರೆ. ಈ ಬಗ್ಗೆ ದೈವವು ಸೂಕ್ತ ಅಭಯವನ್ನು ನೀಡಿರುತ್ತದೆ ವಿನಾ: ಯಾವುದೇ ಚಲನಚಿತ್ರ, ಅದರಲೂ ಮುಖ್ಯವಾಗಿ ಪ್ರಕೃತ ಪ್ರಚಾರದಲ್ಲಿರುವ ಕಾಂತರ-1 ಬಗ್ಗೆ ಯಾವುದೇ ಅಭಯ ನುಡಿಯನ್ನು ದೈವವು ನೀಡಿರುವುದಿಲ್ಲ.
ಆದರೆ ದೈವವು ನಿವೇದನೆಗೆ ಸಂಬಂಧಿಸಿ ನೀಡಿದ ಅಭಯ-ನುಡಿಯನ್ನು ನಿವೇದಿಸಿಕೊಂಡ ಯುವಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವುದಕ್ಕೆ ಶ್ರೀಕ್ಷೇತ್ರದ ಭಕ್ತರು ಗ್ರಾಮಸ್ಥರು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿರುವುದರಿಂದ ಈ ಸ್ಪಷ್ಟಿಕರಣವನ್ನು ಆಡಳಿತ ಮಂಡಳಿ ನೀಡುತ್ತಿದೆ.
ಮೇಲಿನಂತೆ ಶ್ರೀ ಕ್ಷೇತ್ರ ಪೆರಾರದದಲ್ಲಿ ನಡೆದ ಜಾತ್ರ ಸಂದರ್ಭದಲ್ಲಿನ ದೈವ ನಡೆ-ನುಡಿಯಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಗಳು, ಚಲನಚಿತ್ರದ ಬಗ್ಗೆ ಯಾವುದೇ ಅಭಯ-ನುಡಿ ನೀಡುವ ಸಂದರ್ಭ ಬಂದಿರುವ ಕಾರಣ, ಪ್ರಕೃತ ಈ ವಿಚಾರದಲ್ಲಿನ ಗೊಂದಲ-ಭಿನ್ನಾಭಿಪ್ರಾಯಗಳಿಗೆ ಅಲ್ಲದೇ ಈ ಗೊಂದಲ ಶ್ರೀ ಕ್ಷೇತ್ರದ ದೈವ-ದೇವರು-ಆಡಳಿತ ಮಂಡಳಿಯು ಹೊಣೆಗಾರರಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.