ಜೈಪುರ: ಬಾಲಿವುಡ್ ನಟಿ ಮತ್ತು ಬಿಗ್ ಬಾಸ್ ಸೀಸನ್ 5 ನ ಸ್ಪರ್ಧಿ ಪೂಜಾ ಮಿಶ್ರಾ ಅವರ ಮೇಲೆ ಅನಾಮಿಕರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸ್ವತಃ ನಟಿ ಪೂಜಾ ಮಿಶ್ರಾ ರಾಜಸ್ತಾನದ ಉದಯ್ ಪುರದಲ್ಲಿ ದೂರು ದಾಖಲಿಸಿದ್ದು, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಜ್ಯೂಸ್ ನಲ್ಲಿ ಮಾದಕವಸ್ತುಗಳನ್ನು ಬೆರಸಿ ನನಗೆ ಕುಡಿಸಿ ನಾನು ಪ್ರಜ್ಞೆಕಳೆದುಕೊಂಡಾಗ ನನ್ನ ಮೇಲೆ ಲೈಂಗಿಕದೌರ್ಜನ್ಯವೆಸಗಲಾಗಿದೆ ಎಂದು ಪೂಜಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಉದಯ್ ಪುರ ಪೊಲೀಸರು ಐಪಿಸಿ ಸೆಕ್ಷನ್ 354 (ಮಹಿಳೆಯ ವಿರುದ್ಧ ದೌರ್ಜನ್ಯ), 379 (ಕಳ್ಳತನ)ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಲ್ಲದೆ ಪ್ರಸ್ತುತ ನಟಿ ಪೂಜಾ ಮಿಶ್ರಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ನಾಳೆ ಅದರ ವರದಿ ಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೆ ಪ್ರಕರಣ ಸಂಬಂಧ ಅದೇ ಕ್ಯಾಲೆಂಡರ್ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಕೆಲ ನಟರನ್ನು ಕೂಡ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ವಿವರ
ನಟಿ ಪೂಜಾ ಮಿಶ್ರಾ ದೂರಿನಲ್ಲಿ ಆರೋಪಿಸಿರುವಂತೆ, ಪೂಜಾ ತಾವು ಕ್ಯಾಲೆಂಡರ್ ಒಂದರ ಫೋಟೋ ಶೂಟ್ ಗಾಗಿ ರಾಜಸ್ತಾನದ ಉದಯ್ ಪುರಕ್ಕೆ ತೆರಳಿದ್ದು, ಪಂಚತಾರಾ ಹೊಟೆಲ್ ನಲ್ಲಿ ಉಳಿದುಕೊಂಡಿದ್ದರಂತೆ. ನಿನ್ನೆ ರಾತ್ರಿ ಊಟ ಮಾಡಿದ ಮಿಶ್ರಾ ಅವರಿಗೆ ಹೊಟೆಲ್ ಸಿಬ್ಬಂದಿ ಕುಡಿಯಲು ತಂಪು ಪಾನೀಯವನ್ನು ನೀಡಿದ್ದಾರೆ. ತಂಪು ಪಾನೀಯವನ್ನು ಸೇವಿಸಿದ ಪೂಜಾ ಮಿಶ್ರಾ ತಮ್ಮ ಕೊಠಡಿಗೆ ಹೋಗಿ ನಿದ್ರಿಸಿದ್ದಾರೆ. ಈ ವೇಳೆ ಯಾರೋ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಗಾಢವಾದ ನಿದ್ರೆಯಿಂದ ಮೇಲೆದ್ದ ಪೂಜಾ ಮಿಶ್ರಾ ಅವರಿಗೆ ರಾತ್ರಿ ತಮ್ಮ ಮೇಲೆ ಲೈಂಗಿಕ ದೌಜರ್ನ್ಯ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಸಮೀಪದ ಉದಯ್ ಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.