ನವದೆಹಲಿ: ಡಿ.18 ಕ್ಕೆ ಬಿಡುಗಡೆಯಾಗುತ್ತಿರುವ 'ದಿಲ್ ವಾಲೆ' ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ಬಾಲಿವುಡ್ ನಟ ಶಾರೂಖ್ ಖಾನ್, ವಿವಾದಗಳು ತಮ್ಮ ಸಿನಿಮಾ ಮೇಲಾಗಲಿ ಅಥವಾ ತಮ್ಮ ವರ್ಚಸ್ಸಿನ ಮೇಲಾಗಲಿ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದಾರೆ.
ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಇತ್ತೀಚೆಗೆ ಶಾರೂಖ್ ಖಾನ್ ನೀಡಿದ್ದ ಹೇಳಿಕೆಗೆ ಅಕ್ರೋಶಗೊಂಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್), ಶುಕ್ರವಾರ ಬಿಡುಗಡೆಯಾಗಲಿರುವ ಶಾರೂಖ್ ಖಾನ್ ಚಿತ್ರವನ್ನು ವೀಕ್ಷಿಸದಂತೆ ಜನತೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾರೂಖ್ ಖಾನ್ ತಮ್ಮ ಬಗ್ಗೆ ಕೇಳಿಬಂದಿರುವ ವಿವಾದಗಳು ಸಿನಿಮಾ ಮೇಲೆ ಅಥವಾ ತಮ್ಮ ಕೀರ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಜನರು ತಾವು ಹೇಳಬೇಕಿರುವುದನ್ನು ಸಾರ್ವಜನಿಕ ವ್ಯಕ್ತಿಗಳ ಮೂಲಕ ವ್ಯಕ್ತಪಡಿಸಲು ಇಚ್ಚಿಸುತ್ತಾರೆ. ಇದೊಂದು ಸಣ್ಣ ವಿಷಯ, ಆದರೆ ಸಾರ್ವಜನಿಕರು ಸೆಲಬ್ರಿಟಿಗಳ ಮೂಲಕ ತಾವು ಹೇಳಬೇಕಿರುವುದನ್ನು ವ್ಯಕಪಡಿಸಿದ ಮೂಲಕ ಸೆಲಬ್ರಿಟಿಗಳು ಇದಕ್ಕೆ ಸ್ಪಷ್ಟೀಕರಣ ನೀಡಬೇಕಾಗುತ್ತದೆ ಎಂದು ಶಾರೂಖ್ ಖಾನ್ ತಿಳಿಸಿದ್ದಾರೆ.
ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ್ದ ಶಾರೂಖ್ ಖಾನ್ ವಿರುದ್ಧ, ಆಕ್ರೋಶಗೊಂಡಿದ್ದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, ಶಾರೂಖ್ ಖಾನ್ ಅವರ ಭಾಷೆಯನ್ನು ಉಗ್ರ ಹಫೀಜ್ ಭಾಷೆಗೆ ಹೋಲಿಸಿದ್ದರು. ವಿವಾದಗಳು ಸಿನಿಮಾ ಮೇಲೆ ಪರಿಣಾಮ ಬೀರುವುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಶಾರೂಖ್, ಕೀರ್ತಿ ಹೆಚ್ಚಾದಂತೆ ವಿವಾದಗಳಲ್ಲಿ ಸಿಲುಕುವ ಅಪಾಯ ಹೆಚ್ಚಾಗುತ್ತದೆ ಎಂದು ಹಲವು ವರ್ಷಗಳ ಹಿಂದೆ ತಮ್ಮ ಹಿತೈಷಿಗಳು ಹೇಳಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ. "ನಾನು ಜನರಿಂದ ಅತಿ ಹೆಚ್ಚು ಪ್ರೀತಿ ಗಳಿಸಿದ್ದೇನೆ, ವಿವಾದಗಳು ಸಿನಿಮಾ ಮೇಲೆ ಪರಿಣಾಮ ಬೀರುವುದಿಲ್ಲ" ಎಂದಿದ್ದಾರೆ.