ಮುಂಬೈ: ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ನಟನೆಯ ನೃತ್ಯ ಕೇಂದ್ರಿತ ಚಲನಚಿತ್ರ 'ಎಬಿಸಿಡಿ-೨' ೧೦೦ ಕೋಟಿ ಗಳಿಕೆಯನ್ನು ದಾಟಿದೆ. ಸಿನೆಮಾ ಮಾರುಕಟ್ಟೆಯ ಪಂಡಿತರ ಪ್ರಕಾರ ಮೂರನೆ ವಾರದ ಅಂತ್ಯಕ್ಕೆ ಈ ಸಿನೆಮಾದ ಗಳಿಕೆ ಬರ್ರೋಬರಿ ೧೦೧.೯೧ ಕೋಟಿ.
ರೆಮೋ ಡಿಸೋಜಾ ಅವರ ನಿರ್ದೇಶನದ ಈ ಚಲನಚಿತ್ರದ ಯಶಸ್ಸಿನೊಂದಿಗೆ, ವರುಣ್ ಅವರು ೧೦೦ಕೋಟಿ ಕ್ಲಬ್ ಗೆ ಪಾದಾರ್ಪಣೆ ಮಾಡಿದ್ದಾರೆ.
ಜೂನ್ ೧೯ರಂದು ಬಿಡುಗಡೆಯಾದ 'ಎಬಿಸಿಡಿ-೨' ೧೦೦ ಕೋಟಿ ಕ್ಲಬ್ ಸೇರಿದ ೨೦೧೫ರಲ್ಲಿ ಬಿಡುಗಡೆಯಾದ ಎರಡನೇ ಸಿನೆಮಾ. ಇದಕ್ಕೂ ಮುಂಚೆ ಕಂಗನ ರನೌತ್ ಅವರ 'ತನು ವೆಡ್ಸ್ ಮನು ರಿಟರ್ನ್ಸ್' ಚಲನಚಿತ್ರ ಕೂಡ ನೂರು ಕೋಟಿ ಗಳಿಕೆ ಮೀರಿತ್ತು. ಶ್ರದ್ಧಾ ಕಪೂರ್ ಅವರಿಗೆ ೧೦೦ ಕೋಟಿ ಗಳಿಕೆಯ ಎರಡನೆ ಸಿನೆಮಾ ಇದು.
೨೦೧೩ ರ ಎಬಿಸಿಡಿ (ಎನಿಬಡಿ ಕೆನ್ ಡ್ಯಾನ್ಸ್) ಚಲನಚಿತ್ರದ ಸೀಕ್ವೆಲ್ ಎಬಿಸಿಡಿ-೨ ಬಿಡುಗಡೆಯಾದ ದಿನ ಮತ್ತು ವಾರಂತ್ಯ ಅತಿ ಹೆಚ್ಚು ಹಣ ಗಳಿಸಿದ ಸಿನೆಮಾ ಎಂದು ತಿಳಿಯಲಾಗಿದೆ.