ಬಾಲಿವುಡ್‍ನ ಮತ್ತೊಂದು ತಾರಾಜೋಡಿ ಶೀಘ್ರವೇ ಹಸೆಮಣೆ ಏರುವುದು ಖಚಿತವಾಗಿದೆ. ಸದ್ಯದಲ್ಲೇ ನಿಶ್ಚಿತಾರ್ಥವಂತೆ, ಈ ವರ್ಷದಲ್ಲೇ ಮದುವೆಯಂತೆ... ಹಾಗಂತೆ.. ಹೀಗಂತೆ.. ಹೌದಂತೆ.. ಹೀಗೆ ಅಂತೆ ಕಂತೆಗಳಲ್ಲೇ ಕಳೆದ ಮೂರ್ನಾಲ್ಕು ವರ್ಷಗಳಿಂದ ಅಭಿಮಾನಿಗಳನ್ನು ಕುತೂಹಲದಲ್ಲೇ ಇಟ್ಟ ಈ ತಾರಾ ಜೋಡಿ ಇದೀಗ ನಿಜವಾಗಿಯೂ ನಿಶ್ಚಿತಾರ್ಥ ಮಾಡಿಕೊಂಡಿದೆಯಂತೆ.
ಗುರುವಾರ ಕತ್ರೀನಾ ಕೈಫ್ ಮುಂಬೈನಲ್ಲಿ ತಮ್ಮ 32ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದು, ಈ ವೇಳೆ ರಣಬೀರ್, ತಮ್ಮ ಪ್ರಿಯತಮೆಗೆ ದುಬಾರಿ ಪ್ಲಾಟಿನಂ ಉಂಗುರ ತೊಡಿಸಿ ವಿವಾಹ ನಿಶ್ಚಿತಾರ್ಥ ಶಾಸ್ತ್ರ ಪೂರೈಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ಈ ಸಮಾರಂಭದಲ್ಲಿ ಯಾರ್ಯಾರೆಲ್ಲ ಉಪಸ್ಥಿತರಿದ್ದರು ಎಂಬ ಬಗ್ಗೆ ಮಾತ್ರ ಯಾವುದೇ ಮಾಹಿತಿ ಇಲ್ಲ. ಅಲ್ಲದೆ ಶುಕ್ರವಾರ ಬೆಳಗ್ಗೆಯೇ ಜೋಡಿ ಲಂಡನ್‍ಗೆ ತೆರಳಿದೆ. ಅಲ್ಲಿ ರಣಬೀರ್, ಕತ್ರೀನಾ ಪೋಷಕರನ್ನು ಭೇಟಿ ಮಾಡಲಿದ್ದಾರಂತೆ, ಕೆಲ ದಿನ ಅಲ್ಲಿಯೇ ಇರಲಿದ್ದಾರೆ ಎಂದೂ ಸುದ್ದಿಯಿದೆ.