ಬಾಲಿವುಡ್

ಮಿಲಿಯನೇರ್ ಲೈಕ್‍ನ ದಲೇರ್ ಮೆಹಂದಿ

Manjula VN

ಬಾಲಿವುಡ್‍ನಲ್ಲಿ ರೀಮಿಕ್ಸ್ ಮ್ಯೂಸಿಕ್ ಆಲ್ಬಂಗಳ ಮೂಲಕ ಸಿಕ್ಕಾಪಟ್ಟೆ ಪಾಪುಲಾರಿಟಿ ಗಳಿಸಿಕೊಂಡ ಖ್ಯಾತಿ ದಲೇರ್ ಮೆಹಂದಿ ಅವರದ್ದು. `ಬೋಲೊ ತ..ರ..ರ' ಹಿಂದಿ ಹಾಡಿನ ಮೂಲಕ ಆಲ್ಬಂ ಜಗತ್ತಿಗೆ ಎಂಟ್ರಿಯಾದ ದಲೇರ್, ಇವತ್ತು ಸಂಗೀತ ಲೋಕದಲ್ಲಿ ಮನೆಮಾತಾದ ಹೆಸರು.

ಸ್ಥಳೀಯ ಸಂಗೀತ ಪ್ರಕಾರಗಳಿಗೆ ಪಾಶ್ಚಾತ್ಯ ಸಂಗೀತವನ್ನು ಮಿಕ್ಸ್ ಮಾಡಿ, ಹೊಸ ರುಚಿ ಉಣಬಡಿಸಿದ ಖ್ಯಾತಿ ಅವರಿಗಿದೆ. ಹೀಗಾಗಿ ಇವತ್ತು ದಲೇರ್ ಎಂದಾಕ್ಷಣ ರೀಮಿಕ್ಸ್‍ನ ಜನಪ್ರಿಯ ಗೀತೆ `ಟುಣಕ್..ಟುಣಕ್...' ಹಾಡು ನೆನಪಾಗುವುದರಲ್ಲಿ ಅನುಮಾನವೇ ಇಲ್ಲ. ಪಂಜಾಬಿ ಶೈಲಿಯ ಈ ಆಲ್ಬಂಗೆ ಇಲ್ಲಿ ತನಕ ವಿಶ್ವದಾದ್ಯಂತ ಆನ್‍ಲೈನ್ ಮೂಲಕ 92 ಮಿಲಿಯನ್ ಲೈಕ್ ಬಂದಿವೆಯಂತೆ. ಹೀಗೆ ಹೇಳಿ ದಲೇರ್ ಹುಬ್ಬು ಹಾರಿಸುತ್ತಾರೆ. ಭಾರತ ಮಾತ್ರವಲ್ಲ ವಿಶ್ವದಾದ್ಯಂತ ದಲೇರ್ ಅವರಿಗಿರುವ ಜನಪ್ರಿಯತೆ ಇದು.

`ಪವರ್ ಆಫ್ ಡ್ಯಾನ್ಸ್' ಚಿತ್ರದ ಮೂಲಕ ನಿರ್ಮಾಪಕರಾಗಿ ಕನ್ನಡಕ್ಕೆ ಎಂಟ್ರಿಯಾಗಿರುವ ಇವರು ತಮ್ಮ ಆಲ್ಬಂಗಳ ಬಗ್ಗೆ ಹೇಳಿಕೊಂಡರು. ಮೊದಲ ಆಲ್ಬಂ `ಬೋಲೊ ತ.. ರ..ರ' ದಿಂದ `ಶಾ ರ..ರ..' ತನಕ ಮಾತನಾಡಿದರು. ಆದರೆ, ಟುಣಕ್..ಟುಣಕ್... ಆಲ್ಬಂ ಕುರಿತು ಮತ್ತೆ ಮತ್ತೆ ಮೆಲುಕು ಹಾಕಿದರು. ಮೊದಲ ಆಲ್ಬಂ `ಬೋಲೋ ತ..ರ..ರ' 20 ಮಿಲಿಯನ್ ಕಾಪಿ ಸೋಲ್ಡ್ ಆಗಿತ್ತಂತೆ. ಅಲ್ಲಿಂದ ರೀಮಿಕ್ಸ್ ಮ್ಯೂಸಿಕ್ `ಟುಣಕ್..ಟುಣಕ್...' ಆಲ್ಬಂ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.

ಆದರೂ ಎಲ್ಲವೂ ತಮಗೆ ಇಷ್ಟವೇ ಎನ್ನುತ್ತಾರೆ ದಲೇರ್ ಸಿಂಗ್ ಅಲಿಯಾಸ್ ದಲೇರ್ ಮೆಹಂದಿ. ಆ ಪಾಪುಲಾರಿಟಿಯ ಪ್ರಭಾವವೋ ಅಥವಾ ಒಬ್ಬ ಸಂಗೀತಗಾರನಾಗಿ ತಾವೇ ರೂಢಿಸಿಕೊಂಡ ಶಿಸ್ತೋ ಗೊತ್ತಿಲ್ಲ. ದಲೇರ್ ಉಡುಗೆಯಲ್ಲೂ ತುಂಬಾ ಫ್ಯಾಷನ್ ಆಗಿರುವ ಮನುಷ್ಯ. ಹುಟ್ಟು ಬಿಹಾರಿಯಾದರೂ ತಲೆಗೆ ಟರ್ಬನ್ ಬೇಕೇ ಬೇಕು. ಇದು ಸಿಂಗ್‍ಜೀಗಳ ಸಿಂಬಲ್. ತನಗೆ ಇಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ಪಂಜಾಬಿಯ `ಭಲ್ಲೆ..ಭಲ್ಲೆ..' ಹಾಡು ಕುಣಿತ. ಅದು ಅದರ ಸಂಕೇತವೂ ಇರಬಹುದು. ಹೀಗಾಗಿಯೇ ದಲೇರ್ ಅವರನ್ನು ಪಂಜಾಬಿ ಅಂದುಕೊಂಡವರು ಅನೇಕರು. `ನೀವು ಸಂಗೀತ ಲೋಕಕ್ಕೆ ಬಂದಿದ್ದು ಹೇಗೆ?' ಎಂಬ ಕುತೂಹಲದ ಪ್ರಶ್ನೆಗೆ ದಲೇರ್, ಅದಕ್ಕೆ ತಮ್ಮ ತಂದೆ-ತಾಯಿಯೇ ಕಾರಣ ಅಂದರು. ಪತ್ರಿಕಾಗೋಷ್ಠಿಯಲ್ಲೂ ದಲೇರ್ ಸಹಜವಾಗಿ ಕಾಣಿಸಿಕೊಳ್ಳುವುದಿಲ್ಲ. ಸ್ಟೈಲಿಷ್ ಆಗಿಯೇ ಬರುತ್ತಾರೆ.

SCROLL FOR NEXT