ಮುಂಬೈ: ದೊಡ್ಡ ಮಾತುಗಳು, ದೊಡ್ಡ ಬೇಡಿಕೆ ಮತ್ತು ಬಾಲಿವುಡ್ ನ ಅತಿ ಬೇಡಿಕೆಯುಳ್ಳ ನಟಿ ಕಂಗನಾ ರನೌತ್ ಆವರ ೧೧ ಕೋಟಿ ಸಂಭಾವನೆ, ಇವೆಲ್ಲ ಕಂಗನಾ ರನೌತ್ ಅವರನ್ನು ಜನಪ್ರಿಯ ನಟಿಯನ್ನಾಗಿಸಿರುವುದಲ್ಲದೆ ಸದಾ ಸುದ್ದಿಯಲ್ಲಿರುವಂತೆ ಮಾಡಿದೆ.
ಕೇತನ್ ಮೆಹ್ತಾ ಅವರು ನಿರ್ದೇಶಿಸಬೇಕಿದ್ದ 'ರಾಣಿ ಲಕ್ಷ್ಮೀಭಾಯಿ' ಸಿನೆಮಾ ಈಗ ಅನಿರ್ಧಿಷ್ಟ ಕಾಲದವರೆಗೆ ಮುಂದೂಡಲಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿದ್ದ ಝಾನ್ಸಿ ರಾಣಿ ಲಕ್ಷ್ಮಿ ಭಾಯಿ ಅವರ ಜೀವನಾಧಾರಿತ ಈ ಬಯೋಪಿಕ್ ಕಂಗನಾ ಅವರ ಕನಸಿನ ಚಿತ್ರ ಎಂದೇ ಬಣ್ಣಿಸಲಾಗಿತ್ತು. ನಿರ್ದೇಶಕ ಸಿನೆಮಾ ಒಂದು ವರ್ಷಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದರು, ಸಿನೆಮಾದ ಭವಿಷ್ಯದ ಬಗ್ಗೆ ಸಂದೇಹಗಳಂತೂ ಮೂಡಿವೆ.
ಮೂಲಗಳ ಪ್ರಕಾರ ಕೇತನ್ ಮೆಹ್ತಾ ಈ ಬಯೋಪಿಕ್ ನಿರ್ದೇಶಿಸಲು ಅತಿ ಹೆಚ್ಚು ಉತ್ಸುಕರಾಗಿದ್ದರು ಆದರೆ ಸಿನೆಮಾದ ಬಜೆಟ್ ಮಿತಿಮೀರಿ ಬೆಳೆದಿರುವುದು ನಿರ್ಮಾಪಕರನ್ನು ಚಿಂತೆಗೀಡು ಮಾಡಿದೆಯಂತೆ. ಅಲ್ಲದೆ ಈ ಪಾತ್ರಕ್ಕೆ ಬೇರೆ ನಟಿಯರ ಚಿಂತನೆಯೂ ಬಂದಿರಬಹುದು ಎನ್ನುತ್ತವೆ ಮೂಲಗಳು.