ನವ್ಯ ನವೇಲಿ ನಂದಾ! ಈ ಹೆಸರನ್ನು ನಾವಿಷ್ಟೊತ್ತಿಗೆ ಸಾವಿರಾರು ಸಲ ಕೇಳಿರಬೇಕಿತ್ತು. ಕಾರಣ, ಇವಳು ಬಿಗ್‍ಬಿ ಅಮಿತಾಭ್ ಬಚ್ಚನ್‍ನ ಮೊಮ್ಮಗಳು! ಮೊನ್ನೆ ಮೊನ್ನೆ ಹುಟ್ಟಿದ ಐಶ್ವರ್ಯ ರೈ ಮಗಳು 'ಆರಾಧ್ಯ ಬಚ್ಚನ್' ಹೆಸರನ್ನೇ ನೂರಾರು ಸಲ ಕೇಳಿರುವಾಗ, ಇಪ್ಪತ್ತು ವರುಷ ಸುಮಾರಿನ ಈ ನವ್ಯ ಇನ್ನೂ ನಮಗೆ ಪರಿಚಯಗೊಂಡಿಲ್ಲ! ಬಚ್ಚನ್ ಫ್ಯಾಮಿಲಿ ಈಕೆಯನ್ನು ವಜ್ರದ ಮಣಿಯಂತೆ ಬಚ್ಚಿಟ್ಟಿದೆ. ಈ ರೂಪರಾಶಿಯನ್ನು ಗೌಪ್ಯವಾಗಿಡಲು ಕಾರಣ ಏನಿದ್ದಿರಬಹುದು?
ಈ ರಹಸ್ಯ ಹುಡುಕುತ್ತಾ ಹೋದ್ರೆ ನೀವು ಪ್ಯಾರೀಸ್‍ಗೆ ಹೋಗ್ಬೇಕು. ಅಲ್ಲಿ ನವೆಂಬರ್ 28ರಿಂದ 'ಡಿಬಟಂಟ್ ಬಾಲ್' ಈವೆಂಟ್ ನಡೆಯುತ್ತಿದೆ. ವಿಶ್ವದ ಪ್ರತಿಷ್ಠಿತ ನಗರಗಳಲ್ಲಿ ಒಂದೊಂದು ವರುಷ ನಡೆಯುವ ಈ ಕಾರ್ಯಕ್ರಮವನ್ನೀಗ ಪ್ರಣಯ ನಗರಿ ಪ್ರಾಯೋಜಿಸುತ್ತಿದೆ. ವಿಶ್ವದ ಅತ್ಯುನ್ನತ ದರ್ಜೆಯ ಫ್ಯಾಮಿಲಿಗಳ ಸಮಾಗಮ ಅಲ್ಲಾಗುತ್ತದೆ. ಆ ಫ್ಯಾಮಿಲಿಗಳಲ್ಲಿ ಯಾರಾದರೂ ಟೀನೇಜ್ ಯುವತಿ ಇದ್ದರೆ ಅಲ್ಲಿ ಜಾಗತಿಕವಾಗಿ ಪರಿಚಯಿಸಲಾಗುತ್ತದೆ.
ಈ ಹೊಸಮುಖ ತನ್ನ ಪ್ರತಿಭೆಯನ್ನು ಅಲ್ಲೇ ಪ್ರಕಟಿಸಬಹುದು. ಅವಳು ಅತಿರಥ ಸುಂದರಿ ಆಗಿದ್ದರೆ ಫ್ಯಾಶನ್ ಲೋಕಕ್ಕೆ ತೆರಳುವ ಇಚ್ಛೆ ವ್ಯಕ್ತಪಡಿಸಬಹುದು. ಇಲ್ಲವಾದರೆ ಯಾರಾದರೂ ಸಿರಿವಂತ ಹುಡುಗನ ಕೈಹಿಡಿಯುವ ಬಯಕೆಯನ್ನು ಮುಂದಿಡಬಹುದು. ಅದೂ ಅಲ್ಲದಿದ್ದರೆ ನಟನೆಗೆ ಕಾಲಿಡುವ ಸುಳಿವು ನೀಡಬಹುದು. ಲೇಖಕಿ, ಸಂಗೀತಗಾತಿಯೂ ಆಗುವ ಆಸೆಯನ್ನು ಹಾಸಿಡಬಹುದು. ಹೀಗೆ ಪರಿಚಯಗೊಳ್ಳುವ ಮುಖ ಯಾವತ್ತೂ ಈ ಹಿಂದೆ ಪ್ರಚಾರದ ಬಾಯಿಗೆ ಸಿಲುಕಿರುವುದಿಲ್ಲ. ಈ ಕಾರ್ಯಕ್ರಮವೇ ಆಕೆಯ ಪಾಲಿಗೆ ಚೊಚ್ಚಲ ಅದ್ಧೂರಿ ಪ್ರಚಾರ.
ಬಚ್ಚನ್ ಫ್ಯಾಮಿಲಿ ಬಚ್ಚಿಟ್ಟ ನವ್ಯ ನವೇಲಿ ನಂದಾ ಇಲ್ಲೇ ಪರಿಚಯಗೊಳ್ಳಲಿದ್ದಾಳೆ! ಯಾರಿವಳು ನವ್ಯ? ಅಮಿತಾಭ್‍ಗೆ ಮಗ ಇದ್ದಾನೆಂಬುದು ಗೊತ್ತು. ಮಗಳಿರುವ ಬಗ್ಗೆ ಯಾರಿಗೂ ಅಷ್ಟು ಗೊತ್ತಿದ್ದಂತಿಲ್ಲ. ಶ್ವೇತಾ ನಂದಾ ಎಂಬ ಮಗಳಿದ್ದಾಳೆ. ಶ್ವೇತಾಳ ಗಂಡ ದೆಹಲಿಯ ಖ್ಯಾತ ಉದ್ಯಮಿ ನಿಖಿಲ್ ನಂದಾ. ಇವರಿಬ್ಬರ ಮಗಳೇ ನವ್ಯ ನವೇಲಿ! ಬಾಲಿವುಡ್‍ನಲ್ಲಿ ಹೀರೋಯಿನ್ ಆಗುವ ಎಲ್ಲ ಲಕ್ಷಣ ಹೊಂದಿರುವ ನವ್ಯ ಈಗಷ್ಟೇ ಲಂಡನ್ನಿನಿಂದ ಓದು ಮುಗಿಸಿ ಬಂದವಳು. ಕೆಲವು ಖಾಸಗಿ ಪಾರ್ಟಿಗಳಲ್ಲಿ ಶಾರೂಖ್ ನ ಮಗ ಆರ್ಯನ್ ಜೊತೆ ಇವಳು ಕಾಣಿಸಿಕೊಂಡರೂ ಯಾರಿಗೂ ಈಕೆಯ ಬಗ್ಗೆ ಪೂರ್ಣ ಸುದ್ದಿ ಸಿಕ್ಕಿರಲಿಲ್ಲ.
ಬಹುಶಃ ನಟಿ ಆಗಲ್ಲ! ಬಚ್ಚನ್ ಕುಟುಂಬದಲ್ಲಿ ಅಮಿತಾಭ್, ಜಯಾ, ಅಭಿಷೇಕ್, ಐಶ್ವರ್ಯ- ಎಲ್ಲರೂ ನಟರೇ. ನವ್ಯ ಕೂಡ ನಟಿಸ್ತಾಳಾ? ಇಲ್ಲ ಎನ್ನುತ್ತವೆ ಬಚ್ಚನ್ ಕುಟುಂಬದ ಮೂಲಗಳು. ನವ್ಯ ಬಾಲಿವುಡ್‍ನಲ್ಲಿ ನಟಿ ಆಗೋದು ಸ್ವತಃ ಅಮಿತಾಭ್‍ಗೇ ಇಷ್ಟ ಇಲ್ವಂತೆ. ಕೆಲವು ಸಿನಿಮಾ ನಿರ್ಮಾಪಕರು ಮನವಿ ಮಾಡ್ಕೊಂಡರೂ ಈ ಆಫರನ್ನು ಬಚ್ಚನ್ ತಿರಸ್ಕರಿಸಿದ್ದಾರಂತೆ.
ನವ್ಯ ಸೂಪರ್ ಟಾಲೆಂಟ್ ನವ್ಯ ಪಿಯಾನೋವನ್ನು ಚೆನ್ನಾಗಿ ನುಡಿಸುತ್ತಾಳೆ. ಇಂಗ್ಲೆಂಡಿನಿಂದ ಈಕೆ ಬಂದಾಗಲೆಲ್ಲ ಗಂಟೆಗಟ್ಟಲೆ ಈಕೆಯ ಜೊತೆ ಕೂತು ಪಿಯಾನೋ ಸವಿಯುವುದು ಬಚ್ಚನ್ ಹಾಬಿ. ಇವರಿಬ್ಬರೂ ಜೊತೆಗೆ ಕುಳಿತ ಫೋಟೋವನ್ನು ಬಚ್ಚನ್ ತಮ್ಮ ಬ್ಲಾಗಿನಲ್ಲಿ ಫೋಸ್ಟ್ ಮಾಡಿಕೊಂಡಿದ್ದರು. ಇಷ್ಟೇ ಅಲ್ಲ, ನವ್ಯ ಒಳ್ಳೆಯ ಲೇಖಕಿಯೂ ಹೌದು. ಕೆಲವು ಕವಿತೆಗಳನ್ನು ರಚಿಸಿದ್ದಾಳೆ. ಕೆಲ ತಿಂಗಳ ಹಿಂದೆ 'ಹೆಲೋ' ಎಂಬ ಮ್ಯಾಗಜೀನ್‍ಗೆ ಇವಳು ಬರೆದ ಲೇಖನವನ್ನು ಬಚ್ಚನ್ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದರು. ಈಕೆಯನ್ನು ಲೇಖಕಿ ಮಾಡುವ ದೊಡ್ಡ ಕನಸನ್ನೂ ಬಚ್ಚನ್ ಇಟ್ಕೊಂಡಿದ್ದಾರಂತೆ. ಸ್ವತಃ ಅಮಿತಾಭ್‍ನ ತಂದೆ ಹರಿವಂಶ ರೈ ಬಚ್ಚನ್ ಹಿಂದಿ ಕಂಡ 20ನೇ ಶತಮಾನದ ಹೆಸರಾಂತ ಲೇಖಕರಲ್ಲೊಬ್ಬರು. ಇವರ ಸಾಹಿತ್ಯ ಕೃಷಿಗೆ ಪದ್ಮಭೂಷಣವೂ ಲಭಿಸಿತ್ತು. ಇವರ 'ಮಧುಶಾಲಾ' ಇವತ್ತಿಗೂ ಮೌಲ್ಯದಾಯಕ ಕವನಸಂಕಲನ ಎನಿಸಿಕೊಂಡಿದೆ. ಮೊಮ್ಮಗಳು ನವ್ಯ ಕೂಡ ಆ ಲೆವೆಲ್ಲಿಗೆ ಬೆಳೆಯಬೇಕೆಂಬುದು ಅಮಿತಾಭ್ ಆಸೆ. ಹಾಗಾದರೆ, ಈ ನವ್ಯ ಏನಾಗಬಹುದು? ಮಿಲಿಯನ್ ಅಲ್ಲ, ಬಿಲಿಯನ್ ಡಾಲರ್ ಪ್ರಶ್ನೆ!