ಮುಂಬೈ : ಭಾರತದಲ್ಲಿ ಹೆಣ್ಮಕ್ಕಳು, ಸೊಸೆಯಂದಿರು, ಮಹಿಳೆಯರು ಸೀಲಿಂಗ್ ಫ್ಯಾನ್‌ಗೆ ನೇತು ಹಾಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಭಾರತದಲ್ಲಿ ಸೀಲಿಂಗ್ ಫ್ಯಾನ್ ನಿಷೇಧ ಮಾಡಬೇಕೆಂದು ನಾನು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ವಿನಂತಿಸುತ್ತಿದ್ದೇನೆ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ರಾಖಿ ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಕುಟುಂಬಕ್ಕೆ ರು. 5 ಕೋಟಿ ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅದೇ ವೇಳೆ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವುದಕ್ಕಿಂತ ದೇಶದಲ್ಲಿ ಸೀಲಿಂಗ್ ಫ್ಯಾನ್ ನಿಷೇಧ ಮಾಡುವುದು ಮುಖ್ಯವಾಗಿದೆ.
ಈ ಸೀಲಿಂಗ್ ಫ್ಯಾನ್ ಸಹಾಯದಿಂದಲೇ ಸೊಸೆ, ಮಗಳು ಹೀಗೆ ಮಹಿಳೆಯರು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಯಾರು ತಮ್ಮ ಮಗಳನ್ನು ಪ್ರೀತಿಸುತ್ತಾರೋ ಅವರೆಲ್ಲ ಮನೆಯಲ್ಲಿ ಸೀಲಿಂಗ್ ಫ್ಯಾನ್ ಬಳಸುತ್ತಿದ್ದರೆ ಅದನ್ನು ತೆಗೆದು ಹಾಕಿ, ಅದರ ಬದಲು ಟೇಬಲ್ ಫ್ಯಾನ್ ಅಥವಾ ಎಸಿ ಬಳಸಿ ಎಂದು ರಾಖಿ ಹೇಳಿದ್ದಾರೆ.
ಏತನ್ಮಧ್ಯೆ, ಪ್ರತ್ಯೂಷಾ ಬ್ಯಾನರ್ಜಿಯನ್ನು ಆಕೆಯ ಬಾಯ್‌ಫ್ರೆಂಡ್ ರಾಹುಲ್ ರಾಜ್ ಸಿಂಗ್ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿದ ರಾಖಿ, ರಾಹುಲ್ ಆಕೆಯನ್ನು ಪೀಡಿಸುತ್ತಿದ್ದ. ಹಾಗೆಲ್ಲಾ ಮಾಡಬೇಡ ಎಂದು ನಾನು ಅವನಿಗೆ ಹಲವಾರು ಬಾರಿ ಹೇಳಿದ್ದೆ ಎಂದಿದ್ದಾರೆ.