ಬಾಲಿವುಡ್

'ಉಡ್ತಾ ಪಂಜಾಬ್'ಗೆ 1 ಕಟ್ ನೊಂದಿಗೆ 'ಎ' ಸರ್ಟಿಫಿಕೇಟ್ ನೀಡಿ: ಬಾಂಬೆ ಹೈಕೋರ್ಟ್

Lingaraj Badiger
ಮುಂಬೈ: ಕೇಂದ್ರೀಯ ಚಲನಚಿತ್ರ ದೃಢೀಕರಣ ಮಂಡಳಿ(ಸಿಬಿಎಫ್ ಸಿ) ಸೂಚಿಸಿದ್ದ 89ಕಟ್ ಗಳನ್ನು ಒಂದಕ್ಕಿಳಿಸಿರುವ ಬಾಂಬೆ ಹೈಕೋರ್ಟ್, 'ಉಡ್ತಾ ಪಂಜಾಬ್'ಗೆ 1 ಕಟ್ ನೊಂದಿಗೆ 'ಎ' ಸರ್ಟಿಫಿಕೇಟ್ ನೀಡುವಂತೆ ಸೋಮವಾರ ಆದೇಶಿಸಿದೆ. ಇದರಿಂದ ಸಿಬಿಎಫ್ ಸಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅವರಿಗೆ ತೀವ್ರ ಮುಖಭಂಗವಾಗಿದೆ.
ನೈಜ ಕಥೆಯಾಧರಿಸಿ ಸಿನಿಮಾ ನಿರ್ದೇಶಿಸಿದ್ದ ಅನುರಾಗ್ ಕಶ್ಯಪ್ ಅವರಿಗೆ ಸೆನ್ಸಾರ್ ಮಂಡಳಿ ಆಘಾತ ನೀಡಿತ್ತು. ಪಂಜಾಬಿನ ಡ್ರಗ್ ಮಾಫಿಯಾ ಸತ್ಯಾಸತ್ಯತೆ ಬಿಚ್ಚಿಡುವ ಉಡ್ತಾ ಪಂಜಾಬ್ ಚಿತ್ರದ 89 ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯ 89 ಕಟ್ ಗಳ ವಿರುದ್ಧ ಚಿತ್ರತಂಡ ಹೈಕೋರ್ಟ್ ಮೆಟ್ಟಿಲೇರಿತ್ತು. 
ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಇಂದು ಅಂತಿಮ ತೀರ್ಪು ಪ್ರಕಟಿಸಿದೆ. ಅಲ್ಲದೆ ಚಲನ ಚಿತ್ರಗಳಿಗೆ ಕತ್ತರಿ ಪ್ರಯೋಗ ಮಾಡುವ (ಸೆನ್ಸಾರ್) ಅಧಿಕಾರವನ್ನು ಶಾಸನಬದ್ಧವಾಗಿ ಸಿಬಿಎಫ್​ಸಿ ಹೊಂದಿಲ್ಲ. ಏಕೆಂದರೆ ಸಿನೆಮಾಟೋಗ್ರಾಫ್ ಕಾಯ್ದೆಯಲ್ಲಿ ಸೆನ್ಸಾರ್ ಎಂಬ ಪದ ಸೇರ್ಪಡೆಯಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
‘ಉಡ್ತಾ ಪಂಜಾಬ್’ಚಿತ್ರವು ಸ್ಥಳ ಒಂದರಲ್ಲಿ ಮಾದಕ ದ್ರವ್ಯ ಹಾವಳಿಯನ್ನು ತೋರಿಸುವ ಚಿತ್ರ. ಅದರಲ್ಲಿ ಪಂಜಾಬನ್ನು ಕೆಟ್ಟದಾಗಿ ತೋರಿಸುವಂತಹ ಅಥವಾ ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆದೆ ಧಕ್ಕೆ ಉಂಟು ಮಾಡುವಂತಹ ಯಾವುದೇ ವಿಚಾರ ನಮಗೆ ಕಾಣುತ್ತಿಲ್ಲ. ಸೃಜನಾತ್ಮಕ ಸ್ವಾತಂತ್ರ್ಯನ್ನು ಅನಗತ್ಯವಾಗಿ ಹತ್ತಿಕ್ಕಬಾರದು. ಚಿತ್ರದಲ್ಲಿ ಏನು ಇರಬೇಕು ಎಂದು ಯಾರೂ ಚಿತ್ರನಿರ್ಮಾಪಕನಿಗೆ ನಿರ್ದೇಶನ ನೀಡುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ.
SCROLL FOR NEXT