ಬಾಲಿವುಡ್ ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ
ಮುಂಬೈ: ಪೋಷಕ ಪಾತ್ರಗಳಲ್ಲೂ ಅತ್ಯುತ್ತಮ ಅಭಿನಯ ನೀಡಿ ಸಿನೆರಸಿಕರ ಪ್ರಶಂಸೆಗೆ ಪಾತ್ರವಾಗಿದ್ದ ಬಾಲಿವುಡ್ ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಇತ್ತೀಚಿನ ಕೆಲವು ಸಿನೆಮಾಗಳಲ್ಲಿ ನಾಯಕ ನಟನ ಪಾತ್ರಗಳು ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಅವುಗಳಿಗೆ ತಾವು ಆದ್ಯತೆ ನೀಡುವುದಿಲ್ಲ ಎಂದಿದ್ದಾರೆ.
"ನಾನು ಕೆಲವು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ ಸ್ಕ್ರಿಪ್ಟ್ ಆಸಕ್ತಿದಾಯಕವಾಗಿರಬೇಕು. ನಾನು ನಾಯಕ ನಟನ ಪಾತ್ರಗಳನ್ನಷ್ಟೇ ಎದುರು ನೋಡುತ್ತಿಲ್ಲ. ನಾಯಕನ ಪಾತ್ರಗಳು ನನ್ನ ಆದ್ಯತೆಯಲ್ಲ. ಸ್ಕ್ರಿಪ್ಟ್ ಆಸಕ್ತಿದಾಯಕವಾಗಿದ್ದು, ತೊಡಗಿಸಿಕೊಳ್ಳಬೇಕು" ಎಂದು ಇತ್ತೀಚೆಗೆ 'ರಮಣ್ ರಾಘವ್ 2.0' ಸಿನೆಮಾದಲ್ಲಿ ನಟಿಸಿರುವ ನವಾಜುದ್ದೀನ್ ಹೇಳಿದ್ದಾರೆ.
ಹಲವಾರು ನಿರ್ದೇಶಕರು ನಟನ ಜೊತೆ ಕೆಲಸ ಮಾಡಲು ಹವಣಿಸುವುದು ಅವನ ಅದೃಷ್ಟ ಎಂದು ಕೂಡ ಅವರು ಹೇಳಿದ್ದು "ಹಲವಾರು ನಿರ್ದೇಶಕರು ನನ್ನ ಕೆಲಸ ಮೆಚ್ಚಿ ಹೊಗಳಿ ನನ್ನ ಜೊತೆಗೆ ಕೆಲಸ ಮಾಡಲು ಇಚ್ಚಿಸುತ್ತಿರುವುದು ಸಂತಸ ನೀಡಿದೆ. ನನಗೆ ಹೆಚ್ಚು ಕೆಲಸ ಸಿಗುತ್ತಿದೆ ಆದರೆ ಕೆಲವು ಬಾರಿ ನಮ್ಮ ಆಯ್ಕೆಯ ಬಗ್ಗೆ ಎಚ್ಚರದಿಂದಿರಬೇಕಾಗುತ್ತದೆ" ಎಂದಿದ್ದಾರೆ ನಟ.
'ರಮಣ್ ರಾಘವ್ 2.0' ನವಾಜುದ್ದೀನ್ ನಟನೆಯನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚಿ ಪ್ರಶಂಸಿಸಿದ್ದರು.