ಮುಂಬೈ: ತಮ್ಮ ಕಾದಂಬರಿ 'ಹಾಫ್ ಗರ್ಲ್ ಫ್ರೆಂಡ್' ನ ಸಿನೆಮಾ ಅವತರಿಣಿಕೆಯ ಸಹ ನಿರ್ಮಾಪಕರು ಆಗಿರುವ ಜನಪ್ರಿಯ ಲೇಖಕ ಚೇತನ್ ಭಗತ್ ಸಿನೆಮಾದ ಚಿತ್ರೀಕರಣದಲ್ಲಿ ಬಹಳಷ್ಟು ಸಮಯ ಕಳೆಯುತ್ತಿದ್ದಾರೆ. ಬರೆಯುವುದಕ್ಕಿಂತಲೂ ಸಿನೆಮಾ ಮಾಡುವುದು ಹೆಚ್ಚು ಶ್ರಮ ಬೇಡುತ್ತದೆ ಎನ್ನುತ್ತಾರೆ ಚೇತನ್.
ಮೋಹಿತ್ ಸೂರಿ ನಿರ್ದೇಶನದ 'ಹಾಫ್ ಗರ್ಲ್ ಫ್ರೆಂಡ್' ನಲ್ಲಿ ಅರ್ಜುನ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನಟಿಸುತ್ತಿದ್ದು ಸಿನೆಮಾ ನಿರ್ಮಾಣ ಹಂತದಲ್ಲಿದೆ.
ಟ್ವಿಟ್ಟರ್ ನಲ್ಲಿ ಸಿನೆಮಾ ಸೆಟ್ ನಲ್ಲಿನ ತಮ್ಮ ಅನುಭವ ಹಂಚಿಕೊಂಡಿರುವ ಚೇತನ್ ಭಗತ್ "ಪ್ರಾರಂಭದಿಂದ ಕೊನೆಯವರೆಗೂ ಮೊದಲ ಬಾರಿಗೆ ಸಿನೆಮಾ ಸೆಟ್ ನಲ್ಲಿ ತೊಡಗಿಸಿಕೊಂಡಿದ್ದೇನೆ. ತುಂಬಾ ಶ್ರಮದ ಕೆಲಸ ನಡೆಯುತ್ತಿದೆ. ನಿರ್ದೇಶಕರ ಮೇಲೆ ನೂತನವಾಗಿ ಗೌರವ ಹುಟ್ಟಿದೆ. ಪೆನ್ನು ಮತ್ತು ಕಾಗದ ಬಹಳ ಸುಲಭ! ಹಾಫ್ ಗರ್ಲ್ ಫ್ರೆಂಡ್" ಎಂದಿದ್ದಾರೆ.
ಚೇತನ್ ಭಗತ್ ಅವರ ಪುಸ್ತಕಗಳು ಸಿನೆಮಾ ಆಗುತ್ತಿರುವುದು ಇದೇ ಮೊದಲೇನಲ್ಲ. ಅವರ ಹಿಂದಿನ ನಾಲ್ಕು ಪುಸ್ತಕಗಳು ಈಗಾಗಲೇ ಸಿನೆಮಾಗಳಾಗಿವೆ.
ಹಾಫ್ ಗರ್ಲ್ ಫ್ರೆಂಡ್ ಮುಂದಿನ ವರ್ಷ ಏಪ್ರಿಲ್ 28ಕ್ಕೆ ಬಿಡುಗಡೆಯಾಗಬೇಕಿದೆ.