ನವದೆಹಲಿ; ಕಾಮಿಡಿ ನಟ ಕಪಿಲ್ ಶರ್ಮಾ ಅಪರಾಧಿಯಲ್ಲ, ಒಬ್ಬ ಉತ್ತಮ ಮನುಷ್ಯ, ಹೀಗಾಗಿ ಅವರು ವಿವಾದದಿಂದ ಹೊರಬರಲು ಸಹಾಯ ಮಾಡುವುದರಲ್ಲಿ ತಪ್ಪಿಲ್ಲ ಎಂದು ನಟ ವಿವೇಕ್ ಓಬೇರಾಯ್ ಅಭಿಪ್ರಾಯ ಪಟ್ಟಿದ್ದಾರೆ.
ಮುಂಬಯಿ ಮಹಾನಗರ ಪಾಲಿಕೆಯಲ್ಲಿ ಲಂಚದ ಬೇಡಿಕೆ ಇಟ್ಟ ಪ್ರಕರಣದ ಸಂಬಂಧ ಟ್ವೀಟ್ ಮಾಡಿ ಕಪಿಲ್ ಶರ್ಮಾ ಸಂಕಷ್ಟದಲ್ಲಿ ಸಿಲುಕಿದ್ದಾರೆ, ಇದರಿಂದ ಹೊರಬರಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಲು ಕಪಿಲ್ ಶರ್ಮಾ ವಿವೇಕ್ ಓಬೇರಾಯ್ ಅವರ ಸಹಾಯ ಕೇಳಿದ್ದಾರೆ ಎಂದು ಹೇಳಲಾಗಿದೆ.
ನಾನು ಪ್ರತಿ ವರ್ಷ 15 ಕೋಟಿ ಆದಾಯ ತೆರಿಗೆ ಕಟ್ಟುತ್ತಿದ್ದೇನೆ, ಆದರೂ ಮುಂಬಯಿ ಮಹಾನಗರ ಪಾಲಿಕೆ ನನ್ನಿಂದ 5 ಲಕ್ಷ ಲಂಚ ಕೇಳಿದೆ ಎಂದು ಟ್ವೀಟ್ ಮಾಡಿದ್ದರು. ವಿವೇಕ್ ಓಬೇರಾಯ್ ಗಿರುವ ರಾಜಕೀಯ ಸಂಪರ್ಕ ಉಪಯೋಗಿಸಿಕೊಂಡು ಪ್ರಕರಣದಿಂದ ಹೊರಬರಲು ಕಪಿಲ್ ಶರ್ಮಾ ಓಬೇರಾಯ್ ಸಹಾಯ ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸರುವ ಓಬೇರಾಯ್, ಆತ ಉತ್ತಮ ಮನುಷ್ಯ ಎಂದು ನನಗೆ ನಂಬಿಕೆಯಿದೆ. ಜೊತೆಗೆ ನಾವು ಉತ್ತಮ ಸ್ಥಿತಿಯಲ್ಲಿದ್ದಾಗ ಸಮಸ್ಯೆಯಲ್ಲಿ ಸಿಲುಕಿರುವವರಿಗೆ ಸಹಾಯ ಮಾಡಬೇಕು ಎಂಬುದರಲ್ಲಿಯೂ ನನಗೆ ನಂಬಿಕೆಯಿದೆ, ಹೀಗಾಗಿ ನಾನು ಕಪಿಲ್ ಶರ್ಮಾ ಅವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.