ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್(ಸಂಗ್ರಹ ಚಿತ್ರ)
ಮುಂಬೈ: ದೀಪಿಕಾ ಪಡುಕೋಣೆ ನಟಿಸಲಿರುವ ಪದ್ಮಾವತಿ ಚಿತ್ರ ಆರಂಭದಿಂದಲೂ ಸುದ್ದಿಯಲ್ಲಿತ್ತು. ಮಹಿಳಾ ಕೇಂದ್ರಿತ ಚಿತ್ರವಾದ ಇದು ಸಂಜಯ್ ಲೀಲಾ ಬನ್ಸಾಲಿಯವರ ಮುಂದಿನ ಮಹಾತ್ವಾಕಾಂಕ್ಷಿ ಚಿತ್ರವಾಗಿದ್ದು, ಇದರಲ್ಲಿ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಕೂಡ ನಟಿಸುತ್ತಿದ್ದಾರೆ ಎಂದೆಲ್ಲ ಕೇಳಿ ಅಭಿಮಾನಿಗಳಿಗೆ ಬಹಳ ಖುಷಿಯಾಗಿತ್ತು. ಆದರೆ ಸಂಜಯ್ ಲೀಲಾ ಬನ್ಸಾಲಿ ಮತ್ತು ರಣವೀರ್ ಸಿಂಗ್ ಮಧ್ಯೆ ಸಂಬಂಧ ಹಳಸುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
ಚಿತ್ರದಲ್ಲಿ ಶಾಹಿದ್ ಇರುವುದು ರಣವೀರ್ ಗೆ ಇಷ್ಟವಿಲ್ಲವಂತೆ. ಚಿತ್ರದ ಅರ್ಧದಷ್ಟು ಭಾಗವನ್ನು ಶಾಹಿದ್ ಕದಿಯಲಿದ್ದಾರೆ, ಹಾಗಾಗಿ ತನ್ನ ಪ್ರಾಮುಖ್ಯತೆ ಕಡಿಮೆಯಾಗಬಹುದು ಎಂಬ ಆತಂಕ ಕಾರಣವಾಗಿರಬಹುದು ಎನ್ನುತ್ತಿವೆ ವರದಿಗಳು. ಚಿತ್ರದ ಶೀರ್ಷಿಕೆಯಲ್ಲಿ ಶಾಹಿದ್ ಅವರ ಪಾತ್ರವನ್ನು ಅತಿಥಿ ಪಾತ್ರವೆಂದು ಹೆಸರಿಸಬೇಕೆಂದು ರಣವೀರ್ ಸೂಚಿಸಿದರಂತೆ. ಅದಕ್ಕೆ ಬನ್ಸಾಲಿ ಒಪ್ಪಲಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದೆ ಎನ್ನುತ್ತಿವೆ ಮೂಲಗಳು.
ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲು ದೀಪಿಕಾ ಪಡುಕೋಣೆ ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಪಾತ್ರದ ಬಗ್ಗೆ ಚಿಂತಿಸದೆ ಚಿತ್ರದಲ್ಲಿ ಅಭಿನಯಿಸುವಂತೆ ದೀಪಿಕಾ ರಣವೀರ್ ಗೆ ಹೇಳಿದ್ದಾರಂತೆ.
ಇಲ್ಲಿ ಪದ್ಮಾವತಿ ಪಾತ್ರವನ್ನು ದೀಪಿಕಾ ಮಾಡಿದರೆ, ಶಾಹಿದ್ ಆಕೆಯ ಪತಿ ರಾಜಾ ರವಲ್ ರತನ್ ಸಿಂಗ್ ಮತ್ತು ರಣವೀರ್ ಸಿಂಗ್ ಆತನ ಎದುರಾಳಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಗೊಲಿಯೋಂಕಿ ರಾಸ್ ಲೀಲಾ ರಾಮ್ ಲೀಲಾ, ಬಾಜಿರಾವ್ ಮಸ್ತಾನಿ ಹಿಟ್ ಚಿತ್ರಗಳನ್ನು ಇವರಿಬ್ಬರು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.