ವಿನ್ ಡಿಸೆಲ್, ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಡಿಜೆ ಕರುಸೊ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ ರೀತಿ.
ಬಾಲಿವುಡ್ ನ ಜನಪ್ರಿಯ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಇದು ಖುಷಿಯ ವಿಚಾರ. ಅವರ ಬಹು ನಿರೀಕ್ಷಿತ ಹಾಲಿವುಡ್ ಚಿತ್ರ ಎಕ್ಸ್ ಎಕ್ಸ್ ಎಕ್ಸ್: ದ ರಿಟರ್ನ್ ಆಫ್ ಕ್ಸೇಂಡರ್ ಕೇಜ್ ಇದೇ ಸಂಕ್ರಾಂತಿಗೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಅದರ ಪ್ರೀಮಿಯರ್ ಶೋ, ಪ್ರಚಾರ ಕಾರ್ಯ ಭಾರತದಲ್ಲಿ ಆರಂಭಗೊಂಡಿದೆ.
ಹೀಗಾಗಿ ಚಿತ್ರದ ನಾಯಕ, ಹಾಲಿವುಡ್ ನಟ ವಿನ್ ಡಿಸೆಲ್ ಭಾರತಕ್ಕೆ ಇಂದು ಬಂದು ತಲುಪಿದ್ದಾರೆ. ದೀಪಿಕಾ ಮತ್ತು ವಿನ್ ಡಿಸೆಲ್ ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು ನಿಲ್ದಾಣದಿಂದ ಹೊರಗೆ ಬರುವಾಗ ಅವರಿಗೆ ಭಾರತೀಯ ಸಂಸ್ಕೃತಿಯಾಗಿ ಆರತಿ ಎತ್ತಿ ಸ್ವಾಗತಿಸಲಾಯಿತು.ಇವರ ಜೊತೆ ಚಿತ್ರದ ನಿರ್ದೇಶಕ ಡಿಜೆ ಕ್ಯಾರುಸೊ ಕೂಡ ಇದ್ದಾರೆ. ಮೂವರಿಗೂ ಆರತಿ ಎತ್ತಿ ತಿಲಕವಿಟ್ಟು ದೇಸಿ ಸ್ಟೈಲ್ ನಲ್ಲಿ ಸ್ವಾಗತ ಕೋರಲಾಯಿತು.
ಈ ತಾರೆಯರ ಫೋಟೋ ತೆಗೆಯಲು ಅಲ್ಲಿ ನೆರೆದವರತ್ತ ನಗುತ್ತಾ ಕೈ ಬೀಸಿದರು. ಇಂದು ಸಂಜೆ ಮುಂಬೈಯಲ್ಲಿ ದೀಪಿಕಾ ಮತ್ತು ವಿನ್ ಡಿಸೆಲ್ ಪತ್ರಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದು ನಂತರ ಚಿತ್ರದ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ.
ಜನವರಿ ತಿಂಗಳಲ್ಲಿ ತುಂಬಾ ಬ್ಯುಸಿಯಾಗಿರುವ ದೀಪಿಕಾ ನಿನ್ನೆಯಷ್ಟೇ ಲಂಡನ್ ನಲ್ಲಿ ಚಿತ್ರದ ಯುರೋಪಿಯನ್ ಪ್ರೀಮಿಯರ್ ಶೋ ಮುಗಿಸಿಕೊಂಡು ಬಂದಿದ್ದರು. ಜನವರಿ 5ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ ಮೆಕ್ಸಿಕೊದಲ್ಲಿ ಪ್ರೀಮಿಯರ್ ಶೋನ ಭಾಗಿಯಾಗಿದ್ದರು.
ಎಕ್ಸ್ ಎಕ್ಸ್ ಎಕ್ಸ್: ದಿ ರಿಟರ್ನ್ ಆಫ್ ಕ್ಸೇಂಡರ್ ಕೇಜ್ ಇದೇ 19ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.