ಮೆಲ್ಬೋರ್ನ್: ಜಾಗತಿಕ ಸಿನಿಮಾಗೆ ನೀಡಿದ ಕೊಡುಗೆಯನ್ನು ಗುರುತಿಸಿ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರನ್ನು ಮೆಲ್ಬೋರ್ನ್ ಭಾರತೀಯ ಚಲನ ಚಿತ್ರೋತ್ಸವ(ಐಎಫ್ ಎಫ್ ಎಂ)ದಲ್ಲಿ ಸನ್ಮಾನಿಸಲಾಗುತ್ತಿದೆ.
ಐಎಫ್ಎಫ್ಎಂ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತೀಯ ಚಿತ್ರೋದ್ಯಮದ ಅತಿ ದೊಡ್ಡ ಉತ್ಸವವಾಗಿದ್ದು, ಐಶ್ವರ್ಯ ರೈ ಅವರು ಮೆಲ್ಬೋರ್ನ್ ಫೆಡರೇಷನ್ ಸ್ಕ್ವೇರ್ ನಲ್ಲಿ ನಡೆಯುವ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಅಲ್ಲದೆ ಇಲ್ಲಿ ಭಾರತದ ಧ್ವಜಾರೋಹಣ ಮಾಡುತ್ತಿರುವ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಐಶ್ವರ್ಯ ಪಾತ್ರರಾಗಲಿದ್ದಾರೆ.
ಆಗಸ್ಟ್ 11ರಂದು ನಡೆಯುವ ಐಎಫ್ಎಫ್ ಎಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಕ್ಟೋರಿಯಾದ ಸರ್ಕಾರ ಐಶ್ವರ್ಯ ರೈ ಅವರನ್ನು ಸನ್ಮಾನಿಸಲಿದೆ ಎಂದು ಉತ್ಸವದ ನಿರ್ದೇಶಕ ಮಿತು ಭೌಮಿಕ್ ಲ್ಯಾಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.