ಬಾಲಿವುಡ್

ದೆಹಲಿ ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಆಶಾ ಭೋಸ್ಲೆ ಮೇಣದ ಪ್ರತಿಮೆ

Sumana Upadhyaya
ನವದೆಹಲಿ: ಬಾಲಿವುಡ್ ನ ಸುವರ್ಣ ಯುಗದ ಹಿರಿಯ ಗಾಯಕಿ ಎಂದೇ ಕರೆಯಲ್ಪಡುವ ಆಶಾ ಬೋಸ್ಲೆಯವರ ಮೇಣದ ಪ್ರತಿಮೆ ದೆಹಲಿಯ ಮೇಡಮ್ ಟುಸ್ಸಾಡ್ ನಲ್ಲಿ ಅನಾವರಣಗೊಳ್ಳಲಿದೆ.
ಮೇಡಮ್ ಟುಸ್ಸಾಡ್ ನಲ್ಲಿ ಅನೇಕ ಹಿರಿಯ ಕಲಾವಿದರು ಮೇಣದ ಪ್ರತಿಮೆಗಳು ಅನಾವರಣಗೊಂಡಿದ್ದು ಅವರ ಸಾಲಿನಲ್ಲಿ ಆಶಾ ಬೋಸ್ಲೆಯವರ ಪ್ರತಿಮೆಗೆ ಕೂಡ ಬಾಲಿವುಡ್ ಸಂಗೀತ ವಲಯದಲ್ಲಿ ಸ್ಥಾನ ನೀಡಲಾಗುತ್ತದೆ. ಇಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರ ಹಾಡುಗಳನ್ನು, ನೃತ್ಯಗಳ ಪ್ರದರ್ಶನ ನೀಡಬಹುದಾಗಿದೆ.
ಕಳೆದ ವರ್ಷ ಮೇಡಮ್ ಟುಸ್ಸಾಡ್ ನ ತಜ್ಞರ ತಂಡ ಆಶಾ ಬೋಸ್ಲೆಯವರನ್ನು ಭೇಟಿ ಮಾಡಿ 150 ನಿರ್ದಿಷ್ಟ ಅಳತೆಗಳು ಮತ್ತು ಭಾವಚಿತ್ರಗಳನ್ನು ತೆಗೆದುಕೊಂಡಿದ್ದರು.
ಈ ಅಸಾಮಾನ್ಯ ಗೌರವಕ್ಕೆ ನನ್ನನ್ನು ಪರಿಗಣಿಸಿದ್ದಕ್ಕಾಗಿ ಮೇಡಮ್ ಟುಸ್ಸಾಡ್ ತಂಡಕ್ಕೆ ಮತ್ತು ನನ್ನ ಅಭಿಮಾನಿಗಳಿಗೆ ಚಿರಋಣಿಯಾಗಿದ್ದೇನೆ. ಮೇಣದ ಪ್ರತಿಮೆ ಅನಾವರಣಗೊಳ್ಳುವುದೆಂದರೆ ಸಂಪೂರ್ಣವಾಗಿ ಮೋಹಕ ಅನುಭವವಾಗಿದ್ದು ಇದೊಂದು ಹೊಸ ಅನುಭವ ನನಗೆ ಎಂದು ಈ ಹಿರಿಯ ಗಾಯಕಿ ಹೇಳಿದ್ದಾರೆ.
ಬಾಲಿವುಡ್ ಸಂಗೀತ ಪ್ರಿಯರನ್ನು 6 ದಶಕಗಳಿಗೂ ಹೆಚ್ಚು ಕಾಲ ರಂಜಿಸಿದ ಆಶಾ ಬೋಸ್ಲೆ ಸಾವಿರಕ್ಕೂ ಹೆಚ್ಚು ಹಿಂದಿ ಸಿನಿಮಾಗಳಿಗೆ, 20ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಹಾಡಿದ್ದಾರೆ. ಭಾರತದ ಸಂಗೀತ ಇತಿಹಾಸದಲ್ಲಿ ಅತಿ ಹೆಚ್ಚು ಗೀತೆಗಳನ್ನು ಹಾಡಿದ ಕಲಾವಿದೆ ಎಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲೆ ಬರೆದಿದ್ದಾರೆ. 2000ದಲ್ಲಿ ಅವರಿಗೆ ದಾದಾ ಸಾಹೆಬ್ ಫಾಲ್ಕೆ ಮತ್ತು 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳು ಸಿಕ್ಕಿದ್ದವು.
SCROLL FOR NEXT