ನವದೆಹಲಿ: ನೇರ ಮಾತುಗಳಿಗೆ ಹೆಸರಾಗಿರುವ ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್, ಸೆಲೆಬ್ರಿಟಿಗಳ ಮುಖ್ಯ ಹಿನ್ನಡೆಯೆಂದರೆ ಅವರು ಅನೇಕ ಸಾಮಾಜಿಕ ಮತ್ತು ರಾಜಕೀಯ ವಿಷಯಗಳಿಗೆ ಸಂಬಂಧಪಟ್ಟಂತೆ ನಿಲುವು ಹೊಂದಿರಬೇಕೆಂದು, ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರಬೇಕೆಂದು ಜನರು ನಿರೀಕ್ಷಿಸುತ್ತಾರೆ. ಸೆಲೆಬ್ರಿಟಿಗಳು ಮಾದರಿ ವ್ಯಕ್ತಿಗಳಾಗಬೇಕು ಎಂದು ಜನರು ನಿರೀಕ್ಷಿಸಬಾರದು. ಅವರ ಕೆಲಸಗಳನ್ನು ಮಾತ್ರ ಜನರು ಇಷ್ಟಪಡಬೇಕು ಎಂಬುದು ಕಲ್ಕಿಯವರ ಅಭಿಪ್ರಾಯ.
ಸೆಲೆಬ್ರಿಟಿಗಳು ಎಲ್ಲಾ ವಿಷಯಗಳ ಕುರಿತು ಹೇಳಿಕೆಗಳನ್ನು ನೀಡುತ್ತಿರಬೇಕು ಎಂದು ಜನರು ಭಾವಿಸುವುದು ಪ್ರಮುಖ ಹಿನ್ನಡೆ. ಉದಾಹರಣೆಗೆ ಕೆಲವೊಮ್ಮೆ ಸರ್ಕಾರ ಹೊರಡಿಸಿರುವ ಹೊಸ ಕಾನೂನುಗಳು, ಬಾಡಿಗೆ ತಾಯ್ತನ ಇತ್ಯಾದಿ ವಿಷಯಗಳ ಕುರಿತು ಜನರು ನಮ್ಮ ಅಭಿಪ್ರಾಯ ಕೇಳುತ್ತಾರೆ. ಅಂತಹ ವಿಷಯಗಳ ಕುರಿತು ಮಾತನಾಡುವ ಮುನ್ನ ಅದರ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಅದಕ್ಕೆ ನಾವು ಅಧ್ಯಯನ ಮಾಡಬೇಕು ಎಂದು ಐಎಎನ್ಎಸ್ ಸುದ್ದಿ ಸಂಸ್ಥೆಗೆ ಸಂದರ್ಶನವೊಂದರಲ್ಲಿ ಹೇಳಿದರು.
ಸಮಾಜದಲ್ಲಿ ನಡೆಯುವ ಪ್ರತಿ ಘಟನೆಗಳಿಗೆ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಬೇಕೆಂದು ಜನರು ಭಾವಿಸುವುದು ತಪ್ಪು. ನಾವು ನಟರು ಮತ್ತು ನಟನೆ ಮಾಡುವುದು ನಮಗೆ ಗೊತ್ತಿರುತ್ತದೆ. ಅದನ್ನು ಜನ ಗುರುತಿಸಬೇಕು. ಕಲಾವಿದರಾಗಿ ಇತರರಿಗಿಂತ ಸಮಾಜದಲ್ಲಿನ ವಿಷಯಗಳ ಬಗ್ಗೆ ಹೆಚ್ಚು ಪ್ರತಿಕ್ರಿಸಬೇಕಾಗುತ್ತದೆ. ಆದರೆ ಎಲ್ಲಾ ವಿಷಯಗಳಿಗೆ ಮಾದರಿಗಳಾಗಲು ಸಾಧ್ಯವಿಲ್ಲ ಎಂದರು.
33 ವರ್ಷದ ಬಾಲಿವುಡ್ ನಟಿ ಕಲ್ಕಿ ದೇವ್ ಡಿ ಸಿನಿಮಾ ಮೂಲಕ ಚಿರಪರಿಚಿತರಾದರು. ನಂತರ ಶೈತಾನ್, ದೆಟ್ ಗರ್ಲ್ ಇನ್ ಯಲ್ಲೊ ಬೂಟ್ಸ್, ಝಿಂದಗಿ ನ ಮಿಲೇಗಿ ದೋಬಾರ್, ಮೈ ಫ್ರೆಂಡ್ ಪಿಂಟೊ, ಮಾರ್ಗರಿಟಾ ವಿತ್ ಎ ಸ್ಟ್ರಾ, ವೈಟಿಂಗ್ ಮೊದಲಾದ ಸಿನಿಮಾಗಳನ್ನು ಮಾಡಿದರು.
ಕೇವಲ ತೆರೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಬಲವಾದ ನಿಲುವು ವ್ಯಕ್ತಪಡಿಸುವುದಕ್ಕೆ ಹೆಸರುವಾಸಿ. ಮಹಿಳೆಯರ ಹಕ್ಕುಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos