ಟ್ವಿಂಕಲ್ ಖನ್ನಾ ಟ್ವೀಟ್ ಮಾಡಿದ ಚಿತ್ರ
ಮುಂಬೈ: ಅಕ್ಷಯ್ ಕುಮಾರ್ ಅವರು ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರು ಮುಂಬೈನ ಪ್ರಸಿದ್ಧ ಜುಹು ಬೀಚ್ ನಲ್ಲಿ ವ್ಯಕ್ತಿಯೊಬ್ಬ ಬಯಲಿನಲ್ಲಿ ಮಲ- ಮೂತ್ರ ವಿಸರ್ಜನೆ ಮಾಡುತ್ತಿರುವ ಚಿತ್ರ ಟ್ವೀಟ್ ಮಾಡಿದ ಕೆಲ ತಿಂಗಳ ನಂತರ ಅಕ್ಕಿ ಅಲ್ಲಿ ಟಾಯ್ಲೆಟ್ ನಿರ್ಮಿಸುವ ಮೂಲಕ ನಿಜವಾದ ಹಿರೋ ಆಗಿದ್ದಾರೆ.
ಕಳೆದ ವಾರ ಅಕ್ಷಯ್ ಕುಮಾರ್ ಅವರು ಜುಹು ಬೀಚ್ ನಲ್ಲಿ ಟಾಯ್ಲೆಟ್ ನಿರ್ಮಿಸುವಂತೆ ಮತ್ತು ಅದರ ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸುವುದಾಗಿ ನಮಗೆ ಅರ್ಜಿ ಕಳುಹಿಸಿದ್ದರು. ಅವರ ನಿರ್ಧಾರವನ್ನು ಸ್ವಾಗತಿಸಿ ನಾವು ಜುಹು ಬೀಚ್ ನಲ್ಲಿ ಶೌಚಾಲಾಯ ನಿರ್ಮಿಸಿದ್ದೇವೆ. ಇದಕ್ಕಾಗಿ ಖರ್ಚಾದ 10 ಲಕ್ಷ ರುಪಾಯಿ ಅನ್ನು ಬಾಲಿವುಡ್ ನಟ ನೀಡಿದ್ದಾರೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿ ಪ್ರಶಾಂತ್ ಗಾಯಕ್ವಾಡ್ ಅವರು ತಿಳಿಸಿದ್ದಾರೆ.
ಈಗ ನಿರ್ಮಿಸಿರುವ ಮೊಬೈಲ್ ಟಾಯ್ಲೆಟ್ ಅನ್ನು ಉಚಿತ ಬಳಕಗೆ ನೀಡಲಾಗಿದ್ದು, ಅದನ್ನು ನಿರ್ವಹಣೆ ಮಾಡಲು ಯಾರಾದರು ಮುಂದೆ ಬಂದರೆ ಪಾವತಿಸಿ-ಬಳಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಮುಂಬೈ ಬಹಿರ್ದೆಸೆ ಮುಕ್ತ ನಗರ ಎಂದು ಘೋಷಿಸಿದ ನಂತರ ಟ್ವಿಂಕಲ್ ಖನ್ನಾ ಅವರು ಜುಹು ಬೀಚ್ ಬದಿಯಲ್ಲಿ ವ್ಯಕ್ತಿಯೋರ್ವ ಬಯಲು ಶೌಚ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಟ್ವಿಂಕಲ್ ಬೆಳಗಿನ ವಾಕಿಂಗ್ ಹೋಗಿದ್ದ ವೇಳೆ ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇದೇ ವೇಳೆ ಬಯಲು ಶೌಚ ಮುಕ್ತ ಕೆಲಸದ ಕುರಿತು ಟ್ವಿಟರ್‌ನಲ್ಲಿ ಬಿಸಿ ಬಿಸಿ ಚರ್ಚೆ ಕೂಡ ನಡೆಸಿದ್ದರು.
ಈಗ ಅದೇ ಬೀಚ್‌ನಲ್ಲಿ ಅಕ್ಷಯ್ ಕುಮಾರ್ ಟಾಯ್ಲೆಟ್ ಕಟ್ಟಿಸಿದ್ದು, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ.
ಅಕ್ಷಯ್ ಕುಮಾರ್ ಅವರು, 'ಏಕ್ ಪ್ರೇಮ್ ಕಥಾ' ಚಿತ್ರದ ಮೂಲಕ ಬಹಿರ್ದೆಸೆಯ ಕರಾಳ ಮುಖವನ್ನು ತೆರೆ ಮೇಲೆ ಬಿಚ್ಚಿಟ್ಟಿದ್ದರು. ಬಹಿರ್ದೆಸೆ ಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಈ ಸಿನೆಮಾವನ್ನು ಬಳಸಿದ್ದರು.