ಮುಂಬೈ: 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ನನ್ನ ಜೀವನದ ಅತ್ಯುತ್ತಮ ಅಭಿನಯದ ಚಿತ್ರ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಬಾಲಿವುಡ್ ಅನುಪಮ್ ಖೇರ್ ಅವರು ಶುಕ್ರವಾರ ಹೇಳಿದ್ದಾರೆ.
'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್ ಅವರು ಅಭಿನಯಿಸಿದ್ದು, ಚಿತ್ರ ಬಿಡುಗಡೆಗೆ ಮಹಾರಾಷ್ಟ್ರದ ಯುವ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದರೆ ತಮ್ಮ ನಾಯಕನ ಬಗ್ಗೆ ಚಿತ್ರ ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಖುಷಿಪಡಬೇಕು ಎಂದು ಅನುಪಮ್ ಖೇರ್ ಹೇಳಿದ್ದಾರೆ.
'ನಾನು ಈ ಚಿತ್ರದಿಂದ ಹಿಂದೆ ಸರಿಯುವುದಿಲ್ಲ. ಇದು ನನ್ನ ಜೀವನದ ಅತ್ಯುತ್ತಮ ಅಭಿನಯದ ಚಿತ್ರ. ಈ ಚಿತ್ರ ನೋಡಿದರೆ ಸ್ವತಃ ಮನಮೋಹನ್ ಸಿಂಗ್ ಅವರು ಅದನ್ನು ಒಪ್ಪಿಕೊಳ್ಳುತ್ತಾರೆ. ಈ ಚಿತ್ರ ಶೇ.100ರಷ್ಟು ನಿಖರವಾಗಿದೆ ಎಂದು ಅನುಪಮ್ ಖೇರ್ ಅವರು ಟ್ವೀಟ್ ಮಾಡಿದ್ದಾರೆ.
ಅಂದಿನ ಪ್ರಧಾನಮಂತ್ರಿಗಳಿಗೆ ಆಪ್ತರಾಗಿದ್ದ ವ್ಯಕ್ತಿಯೇ ಬರೆದಿದ್ದ ಪುಸ್ತಕವನ್ನು ಆಧರಿಸಿ ನಾವು ಚಿತ್ರವನ್ನು ಮಾಡಿದ್ದೇವೆ. ಈ ಪುಸ್ತಕವನ್ನು ತಿರಸ್ಕರಿಸುವಂತಿಲ್ಲ. ಚಿತ್ರ ಬಿಡುಗಡೆಯಾದ ಬಳಿಕ ಜನರೇ ಈ ಬಗ್ಗೆ ನಿರ್ಧರಿಸುತ್ತಾರೆ. ಈಗೇಕೆ ಚಿತ್ರಕ್ಕೆ ಇಷ್ಟೊಂದು ಬಣ್ಣವನ್ನು ನೀಡುತ್ತಿದ್ದೀರಿ ಎಂದು ಖೇರ್ ಪ್ರಶ್ನಿಸಿದ್ದಾರೆ.
ಗುರುವಾರ 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದೂ ಕಾಂಗ್ರೆಸ್ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದೆ.