ಜೈಪುರ: ಜಾತಿ ನಿಂದನೆ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಅವರು ಈಗ ನಿರಾಳರಾಗಿದ್ದು, ಅವರ ವಿರುದ್ಧದ ಪೊಲೀಸ್ ತನಿಖೆಗೆ ರಾಜಸ್ಥಾನ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಟೈಗರ್ ಜಿಂದಾ ಹೇ ಸಿನಿಮಾ ಪ್ರಚಾರ ಕಾರ್ಯಕ್ರದಲ್ಲಿ ಜಾತಿ ನಿಂದನೆ ಮಾಡಿದ ಸಲ್ಮಾನ್ ಖಾನ್ ಮತ್ತು ನಟಿ ಕತ್ರಿನಾ ಕೈಫ್ ಹಾಗೂ ಇತರರ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂದು ಕೋರಿ ಫೆಬ್ರವರಿ 22ರಂದು ದೆಹಲಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇದರ ವಿಚಾರಣೆ ಫೆ.27ಕ್ಕೆ ನಿಗದಿಯಾಗಿದೆ. ಅಲ್ಲದೆ ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಲಾಗಿದೆ.
ಈ ಮಧ್ಯೆ ರಾಜಸ್ಥಾನ ಹೈಕೋರ್ಟ್ ಇಂದು ಸಲ್ಮಾನ್ ಖಾನ್ ವಿರುದ್ಧದ ಪೊಲೀಸ್ ತನಿಖೆ ತಡೆ ನೀಡಿದೆ.
ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವೊಂದರ ಭಾವನೆಗಳಿಗೆ ಧಕ್ಕೆಯಾಗುವಂಥ ಮಾತು ಆಡಿದ್ದಾರೆ ಎಂದು ಆರೋಪಿಸಿ ದೆಹಲಿಯ ಹರ್‌ನಾಮ್ ಸಿಂಗ್ ಎಂಬವರು ಸಲ್ಲು ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಇನ್ನು ಇದೇ ವಿಷಯವನ್ನು ಮುಂದಿಟ್ಟುಕೊಂಡು ಜೈಪುರದಲ್ಲಿ ವಾಲ್ಮೀಕಿ ಸಮುದಾಯವೂ ಸಲ್ಮಾನ್ ವಿರುದ್ಧ ದೂರು ದಾಖಲಿಸಿತ್ತು.