ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದಲ್ಲಿನ (ಎನ್ ಎಫ್ ಡಿಸಿ)ಹಣಕಾಸಿನ ದುರುಪಯೋಗ ಮತ್ತು ನಿಯಮಗಳ ಉಲ್ಲಂಘನೆಯ ಆರೋಪದ ಕುರಿತಂತೆ ಸಿಬಿಐ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದೆ. ಅನುರಾಗ್ ಕಶ್ಯಪ್ ಸೇರಿ ಅನೇಕ ನಿರ್ದೇಶಕರಿಗೆ ಅನಪೇಕ್ಷಿತ ಪಾವತಿಗಳನ್ನು ಮಾಡಿದ ಬಗ್ಗೆ ಈ ತನಿಖೆಯಲ್ಲಿ ಮಾಹಿತಿ ಕಲೆಹಾಕಲಾಗುವುದು.
ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ದಾಖಲಿಸಿದ ದೂರಿನನ್ವಯ ಸಿಬಿಐ ಈ ಕ್ರಮಕ್ಕೆ ಮುಂದಾಗಿದೆ.ಕೇಂದ್ರೀಯ ತನಿಖಾ ಸಂಸ್ಥೆ ಎನ್ ಎಫ್ ಡಿಸಿ ಹಣಕಾಸು ವ್ಯವಹಾರ ವಿಭಾಗದ ಅಧಿಕಾರಿಗಳಿಗೆ ಅಕ್ಟೋಬರ್ 23ರಂದು ಬರೆದ ಪತ್ರದಲ್ಲಿ ಎನ್ ಎಫ್ ಡಿಸಿ, ಸನ್ ಟಿವಿ, ಯುಎಫ್ ಒ ಮೂವೀಸ್, ನುರಾಗ್ ಕಶ್ಯಪ್ ಫಿಲ್ಮ್ಸ್ ಹಾಗೂ ಅಪರಿಚಿತ ನಿರ್ದೇಶಕರುಗಳ ರುದ್ಧ ಪ್ರಾಥಮಿಕ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಕೆಲ ದಾಖಲೆ ಪತ್ರಗಳನ್ನು ನೀಡುವ ಮೂಲಕ ಎನ್ ಎಫ್ ಡಿಸಿ ತಮ್ಮ ತನಿಖೆಗೆ ಸಹಕರಿಸಬೇಕೆಂದು ತನಿಖಾ ಸಂಸ್ಥೆ ಮನವಿ ಮಾಡಿದೆ.
1975ರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವತಿಯಿಂದ ಎನ್ ಎಫ್ ಡಿಸಿ ಯನ್ನು ಸ್ಥಾಪಿಸಲಾಗಿದ್ದು ಈ ಸಂಸ್ಥೆಯು ಚಲನಚಿತ್ರೋತ್ಸವಗಳ ನಡೆಸಲು ಮತ್ತು ಸರ್ಕಾರದ ವತಿಯಿಂದ ಚಲನಚಿತ್ರಗಳ ಪ್ರಚಾರ ಮಾಡಲು ಕೇಂದ್ರದ ನಿಧಿ ಹಾಗೂ ಇತರೆ ಅನುದಾನಗಳನ್ನು ಪಡೆಯುತ್ತದೆ.
ಕಳೆದ ಫೆಬ್ರವರಿಯಲ್ಲಿ ಸನ್ ಟಿವಿ ನೆಟ್ ವರ್ಕ್ ಗೆ ಅನುಕೂಲ ಕಲ್ಪಿಸುವ ಸಲುವಾಗಿ ನಡೆದ ಅಕ್ರಮದ ಸಂಬಂಧ ನಿಗಮದ ನಿರ್ದೇಶಕಿ ನೀನಾ ಲತಾ ಗುಪ್ತಾ ಅವರನ್ನು ವಜಾಗೊಳಿಸಲಾಗಿತ್ತು. ಸ್ಮೃತಿ ಇರಾನಿ ಮಾಹಿತಿ ಹಾಗೂ ಪ್ರಸಾರ ಸಚಿವೆಯಾಗಿದ್ದ ವೇಳೆ ನಡೆದ ಈ ಘಟನೆ ವಿವಾದಕ್ಕೆ ಆಸ್ಪದ ನೀಡಿತ್ತು.
ಇನ್ನು ದೆಹಲಿ ನ್ಯಾಯಾಲಯದ ಆದೇಶದ ಬಳಿಕ ಗುಪ್ತಾ ಎನ್ ಎಫ್ ಡಿಸಿಗೆ ಪುನರಾಗಮಿಸಿದ್ದರಾದರೂ ಸಚಿವಾಲಯ ಮಾತ್ರ ಅವರನ್ನು ಮತ್ತೆ ವಜಾಗೊಳಿಸಿತ್ತು. ಮೇ ತಿಂಗಳಲ್ಲಿ ಈ ಬೆಳವಣಿಗೆ ನಡೆದಿದ್ದರೆ ಇರಾನಿ ಅವರ ಬದಲು ರಾಜವರ್ಧನ್ ಸಿಂಗ್ ರಾಥೋಡ್ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಗುಪ್ತಾ ಅವರ ಮೇಲಿನ ಆರೋಪಗಳನ್ನು ಸಚಿವಾಲಯವು ಕೈಬಿಟ್ಟಿತ್ತು.