ನವದೆಹಲಿ: ಬಾಲಿವುಡ್ ಬಹು ನಿರೀಕ್ಷಿತರ ಚಿತ್ರ ಲವ್ ಯಾತ್ರಿ ನಿರ್ಮಾಪಕರಾದ ಬಾಲಿವುಡ್ ಸ್ಟಾರ್ ಒಡೆತನದ ಸಲ್ಮಾನ್ ಖಾನ್ ವೆಂಚರ್ಸ್ ಪ್ರೈ.ಲಿ. ಅಥವಾ ನಟ ಸಲ್ಮಾನ್ ವಿರುದ್ಧ ದೇಶದ ಯಾವುದೇ ಭಾಗದಲ್ಲಿ ದಂಡನಾ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಾಧೀಶ ದಿಪಕ್ ಮಿಶ್ರಾ ನೇತೃತ್ವದ ಪೀಠವು ಅಕ್ಟೋಬರ್ 5 ರಂದು ಬಿಡುಗಡೆಯಾಗುವ ’ಲವ್ ಯಾತ್ರಿ’ ಚಿತ್ರಕ್ಕೆ ಸಂಬಂಧಿಸಿ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸಿದೆ.
ಹಿಂದೂ ಭಾವನೆಗಳಿಗೆ ಧಕ್ಕೆ ಆಗುವ ಅಂಶಗಳಿದೆ ಎಂದು ಆರೋಪಿಸಿ ಸಲ್ಮಾನ್ ಖಾನ್ ಹಾಗೂ ಇತರೆ ಏಳು ಮಂದಿಯ ಮೇಲೆ ಬಿಹಾರದ ಮುಜಾಫರ್ ಪುರ ಮಿಥನ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತಮ್ಮ ಮೇಲಿನ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಮಾನ್ ಖಾನ್ ಸುಪ್ರೀಂ ಮೊರೆ ಹೋಗಿದ್ದು ಮನವಿ ಆಲಿಸಿದ ನ್ಯಾಯಾಲಯ ಚಿತ್ರದ ವಿಷಯ ಮತ್ತು ಶೀರ್ಷಿಕೆಯ ವಿಚಾರದಲ್ಲಿ ಚಿತ್ರತಂಡದ ವಿರುದ್ಧ ಯಾವುದೇ ದಂಡನಾ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದೆ.
ಆಯುಷ್ ಶರ್ಮ ಹಾಗೂ ವಾರಿನಾ ಹುಸೇನ್ ಅವರ ಚೊಚ್ಚಲ ಚಿತ್ರ ಇದಾಗಿದ್ದು ಚಿತ್ರತಂಡ ಶೀರ್ಷಿಕೆಯನ್ನು ’ಲವ್ ರಾತ್ರಿ’ ಇಂದ ’ಲವ್ ಯಾತ್ರಿ’ ಎಂದು ಬದಲಿಸಿತ್ತು.