ಬಾಲಿವುಡ್

6ನೇ ಬಾರಿಗೆ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ, ಗಾಯಕಿ ಕನಿಕಾ ಕಪೂರ್ ಆಸ್ಪತ್ರೆಯಿಂದ ಬಿಡುಗಡೆ

Nagaraja AB

ಮುಂಬೈ: ಆರನೇ ಬಾರಿಗೆ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಬಾಲಿವುಡ್ ಖ್ಯಾತ ಗಾಯಕಿ ಕನಿಕಾ ಕಪೂರ್ ಅವರನ್ನು ಲಖನೌನ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಬಿಡುಗಡೆ ಮಾಡಲಾಗಿದೆ. ಕೋವಿಡ್-19 ವೈರಾಣು ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ನಂತರ ಬೇಬಿ ಡಾಲ್ ಸಿಂಗರ್ ಪ್ರಮುಖ ಸುದ್ದಿಯಾಗಿದ್ದರು.

ವಿದೇಶ ಪ್ರಯಾಣ, ಭಾರತಕ್ಕೆ ಬಂದ ನಂತರ ಭೇಟಿಯಾದ ಜನರು, ಮಧ್ಯಪ್ರದೇಶದಲ್ಲಿ ಅನೇಕ ರಾಜಕಾರಣಿಗಳೊಂದಿಗೆ ನಡೆದ ಪಾರ್ಟಿ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿ ಇಟ್ಟಿದ್ದ ಕಾರಣದಿಂದಾಗಿ ಕನಿಕಾ ಕಪೂರ್ ವಿರುದ್ಧ  ತೀವ್ರ ಟೀಕೆಗಳು ಕೇಳಿಬಂದಿದ್ದವು.

ಲಂಡನ್ ನಿಂದ ಲಖನೌಗೆ ಆಗಮಿಸಿದ್ದ ಕನಿಕಾ ಕಪೂರ್, ಕೊರೋನಾವೈರಸ್ ತಪಾಸಣೆಗೂ ಮುನ್ನ ಮೂರು ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದರು.  ಸುಮಾರು 400 ಜನರನ್ನು ಭೇಟಿಯಾಗಿದ್ದರು ಎಂದು ಅವರ ತಂದೆಯೇ ಹೇಳಿಕೆ ನೀಡಿದ್ದರು. ಆದರೆ,  ಕೇವಲ ಒಂದು ಪಾರ್ಟಿಯಲ್ಲಿ ಭಾಗವಹಿಸಿದ್ದು, 30 ಜನರನ್ನು ಭೇಟಿಯಾಗಿದ್ದಾಗಿ ಕನಿಕಾ ಹೇಳುತ್ತಾ ಬಂದಿದ್ದಳು. 

ಲಖನೌನಲ್ಲಿ ನಡೆದ ಪಾರ್ಟಿಯಲ್ಲಿ ಕನಿಕಾ ಕಪೂರ್ ಅವರೊಂದಿಗೆ ತಾವೂ ಕೂಡಾ ಪಾಲ್ಗೊಂಡಿದ್ದಾಗಿ ರಾಜಸ್ತಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಕೂಡಾ ಒಪ್ಪಿಕೊಂಡಿದ್ದರು.  ಆಕೆಯ ಪುತ್ರ ಸಂಸದ ದುಷ್ಯಂತ್ ಸಿಂಗ್ ಸಂಸತ್ತಿನಲ್ಲಿ ಪಾಲ್ಗೊಳ್ಳದೆ ಪಾರ್ಟಿಯಲ್ಲಿ  ಭಾಗವಹಿಸಿದ್ದರಿಂದ ತೀವ್ರ ಟೀಕೆಗೊಳಗಾಗಿದ್ದರು. 

ಜೀವನಕ್ಕೆ ಅಪಾಯಕಾರಿಯಾದಂತಹ ವೈರಾಣು ಹರಡುವಿಕೆಯಲ್ಲಿ ನಿರ್ಲಕ್ಷ್ಯ ಮತ್ತಿತರ ಆರೋಪಗಳ ಆಧಾರದ ಮೇಲೆ ಐಪಿಸಿ ಸೆಕ್ಷನ್ 269, 270 ಮತ್ತು 188 ಅಡಿಯಲ್ಲಿ ಕನಿಕಾ ಕಾಪೂರ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.

SCROLL FOR NEXT