ಬಾಲಿವುಡ್

'ಮಹಾಭಾರತ' ನಟ ಇಂದ್ರನ ಪಾತ್ರಧಾರಿ ಸತೀಶ್ ಕೌಲ್ ಕೊರೋನಾದಿಂದ ಸಾವು!

Vishwanath S

ಲುಧಿಯಾನ: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ನಟ ಸತೀಶ್ ಕೌಲ್ ಶನಿವಾರ ಲುಧಿಯಾನದಲ್ಲಿ ನಿಧನರಾಗಿದ್ದಾರೆ.

ಸೋಂಕು ಪತ್ತೆಯ ನಂತರ 74 ವರ್ಷದ ಸತೀಶ್ ಕೌಲ್ ರನ್ನು ಲುಧಿಯಾನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕು ತೊಂದರೆಗಳಿಂದ ಸಾವನ್ನಪ್ಪಿದ್ದಾರೆ.  ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ ಎಂದು ಅವರ ಸಹೋದರಿ ಸತ್ಯ ದೇವಿ ಮಾಹಿತಿ ನೀಡಿದ್ದಾರೆ.

ಕೌಲ್ 70 ರ ದಶಕದ ಆರಂಭದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 300 ಪಂಜಾಬಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಮತ್ತು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನ ಜನಪ್ರಿಯ ಚಿತ್ರಗಳಾದ 'ರಾಮ್ ಲಖನ್', 'ಪ್ಯಾರ್ ತೋಹ್ ಹೊನಾ ಹಿ ಥಾ' ಮತ್ತು 'ಆಂಟಿ ನಂ 1' ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಪ್ರಸಿದ್ಧ ಪಂಜಾಬಿ ಚಿತ್ರಗಳು 'ಮೌಲಾ ಜಾಟ್', 'ಸಾಸ್ಸಿ ಪುನ್ನು', 'ಇಷ್ಕ್ ನಿಮಾನಾ', 'ಸುಹಾಗ್ ಚೂಡಾ' ಮತ್ತು 'ಪಟೋಲಾ' ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ದೂರದರ್ಶನ ಧಾರಾವಾಹಿ 'ಮಹಾಭಾರತ' ದಲ್ಲಿ ಭಗವಾನ್ ಇಂದ್ರನ ಪಾತ್ರವನ್ನು ನಿರ್ವಹಿಸಿದ್ದರು. ವಿಕ್ರಮ್ ಬೇತಾಳ್ ಧಾರಾವಾಹಿಯಲ್ಲಿನ ಇವರ ಪಾತ್ರ ಜನಪ್ರಿಯವಾಗಿತ್ತು.

ಕೌಲ್ ಅವರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಂತಾಪ ಸೂಚಿಸಿದ್ದಾರೆ. ಪಂಜಾಬಿ ಸಿನೆಮಾ, ಕಲೆ ಮತ್ತು ಸಂಸ್ಕೃತಿಯ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಬಹುಮುಖ ನಟ ಎಂದು ಸಂತಾಪ ಸಂದೇಶದಲ್ಲಿ ಮುಖ್ಯಮಂತ್ರಿ ಬಣ್ಣಿಸಿದ್ದಾರೆ. ಅಗಲಿದ ಆತ್ಮಕ್ಕೆ ಶಾಶ್ವತ ಶಾಂತಿಯನ್ನು ನೀಡುವಂತೆ ಪ್ರಾರ್ಥಿಸಿದ್ದಾರೆ.

SCROLL FOR NEXT