ಬಾಲಿವುಡ್

ಮಾಯಾವತಿ ಕುರಿತ ಅಶ್ಲೀಲ ಜೋಕ್: ವಿಶ್ವಸಂಸ್ಥೆ ರಾಯಭಾರಿ ಹುದ್ದೆಯಿಂದ ನಟ ರಂದೀಪ್ ಹೂಡಾ ವಜಾ

Srinivasamurthy VN

ನವದೆಹಲಿ: ಉತ್ತರ ಪ್ರದೇಶ ಮಾಜಿ ಸಿಎಂ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಕುರಿತು ಅಶ್ಲೀಲವಾಗಿ ಜೋಕ್ ಮಾಡಿದ್ದ ಬಾಲಿವುಡ್ ನಟ ರಂದೀಪ್ ಹೂಡ ಅವರನ್ನು ವಿಶ್ವಸಂಸ್ಥೆಯ ವಿಶ್ವಸಂಸ್ಥೆಯ ಪರಿಸರ ಒಪ್ಪಂದದ ವಲಸೆ ಪ್ರಭೇದಗಳ ಸಂರಕ್ಷಣೆ (ಸಿಎಮ್ಎಸ್) ರಾಯಭಾರಿ ಹುದ್ದೆಯಿಂದ ವಜಾಗೊಳಿಸಲಾಗಿದೆ.

ಬಾಲಿವುಡ್‌ನ ಖ್ಯಾತ ನಟ ರಣದೀಪ್ ಹೂಡಾ ಅವರು ಕೆಲ ವರ್ಷಗಳ ಹಿಂದಿನ ಕಾರ್ಯಕ್ರಮವೊಂದರಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಕುರಿತಾಗಿ ಕೀಳಾಗಿ ಜೋಕ್ ಮಾಡಿದ್ದರು. ಆ ಜೋಕ್‌ನ ವಿಡಿಯೋವೊಂದನ್ನು ನೆಟ್ಟಿಗರೊಬ್ಬರು ಹಂಚಿಕೊಂಡು, ರಣದೀಪ್ ಅವರನ್ನು ಟೀಕಿಸಿದ್ದರು. 9 ವರ್ಷದ ಹಿಂದಿನ ವೀಡಿಯೋ ವ್ಯಾಪಕ ವೈರಲ್ ಆಗಿ, ನಟನ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು.

ಇದೀಗದ ಇದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವಸಂಸ್ಥೆ ವೀಡಿಯೋದಲ್ಲಿನ ಹೇಳಿಕೆಗಳನ್ನು ಆಕ್ರಮಣಕಾರಿ ಎಂದು ಪರಿಗಣಿಸಿ, ಅವರನ್ನು ರಾಯಭಾರಿ ಹುದ್ದೆಯಿಂದ ವಜಾಗೊಳಿಸಿದೆ. ಈ ಪ್ರಕಟಣೆ ಕೂಡ ಹೊರಡಿಸಲಾಗಿದ್ದು, ವಿಶ್ವ ಸಂಸ್ಥೆ ವೀಡಿಯೋದಲ್ಲಿನ ಹೇಳಿಕೆಗಳನ್ನು ಆಕ್ರಮಣಕಾರಿ ಎಂದು  ಕಂಡುಕೊಂಡಿದ್ದು, ರಂದೀಪ್ ಹೂಡ ಇನ್ನು ಮುಂದೆ ರಾಯಭಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದೆ.

'ಸಿಎಮ್ಎಸ್ ಸೆಕ್ರೆಟರಿಯಟ್ ವಿಡಿಯೊದಲ್ಲಿ ಮಾಡಿದ ಕಾಮೆಂಟ್ಗಳನ್ನು ಆಕ್ರಮಣಕಾರಿ ಎಂದು ಪರಿಗಣಿಸಿದ್ದು, ಅವು ಸಿಎಮ್ಎಸ್ ಸೆಕ್ರೆಟರಿಯಟ್ ಅಥವಾ ವಿಶ್ವಸಂಸ್ಥೆಯ ಮೌಲ್ಯಗಳನ್ನು ಪ್ರತಿಬಿಂಬಿಸುವುದಿಲ್ಲ, ಹೂಡಾ ಇನ್ನು ಮುಂದೆ ಸಿಎಮ್ಎಸ್ ರಾಯಭಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

2020 ರ ಫೆಬ್ರವರಿಯಲ್ಲಿ ಮೂರು ವರ್ಷಗಳ ಕಾಲ ವಲಸೆ ಪ್ರಭೇದಗಳ ಸಿಎಮ್ಎಸ್ ರಾಯಭಾರಿಯಾಗಿ ರಣದೀಪ್ ಹೂಡಾ ಅವರನ್ನು ನೇಮಿಸಲಾಗಿತ್ತು. ಸಿಎಮ್ಎಸ್ ವಿಶ್ವಸಂಸ್ಥೆಯ ಒಪ್ಪಂದವಾಗಿದ್ದರೂ, ಯುಎನ್ ಸೆಕ್ರೆಟರಿಯಟ್ ಮತ್ತು ಯುಎನ್ ಎನ್ವಿರಾನ್ಮೆಂಟ್ ಪ್ರೋಗ್ರಾಂ ಎರಡರಿಂದಲೂ ಇದು ಪ್ರತ್ಯೇಕವಾಗಿದೆ. 

ಈಗ್ಗೆ ಕೆಲ ದಿನಗಳ ಹಿಂದೆ 'ಮಳೆಯಲಿ ಜೊತೆಯಲಿ' ಸಿನಿಮಾ ನಟಿ ಯುವಿಕಾ ಚೌಧರಿ ಜಾತಿನಿಂದನೆ ಮಾಡುವ ಪದ ಬಳಸಿ, ಆಮೇಲೆ ಎಲ್ಲರ ಕ್ಷಮೆ ಕೇಳಿದ್ದರು.

SCROLL FOR NEXT